ಮಡಿಕೇರಿ NEWS DESK ಜು.23 : ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಳೆ ಖಾಸಗಿ ಬಸ್ ನಿಲ್ದಾಣದ ರಸ್ತೆ ಭೂಕುಸಿತ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಂತೋಷ್ ಅಣ್ವೇಕರ್ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಹಳೆ ಖಾಸಗಿ ಬಸ್ ನಿಲ್ದಾಣದ ಮಧ್ಯೆ ಕಳೆದ 25 ದಿನಗಳ ಹಿಂದೆ ಸಂಭವಿಸಿದ ಭೂಕುಸಿತದಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಜಿಲ್ಲಾಡಳಿತ, ನಗರಸಭೆ ಹಾಗೂ ಎಲ್ಲಾ ಸಂಬಂಧಪಟ್ಟ ಇಲಾಖೆಗಳಿಗೆ ಈ ಮೂಲಕ ತುರ್ತು ಮನವಿ ಸಲ್ಲಿಸಲಾಗಿದೆ.
ಟ್ರಾಫಿಕ್ ದಟ್ಟಣೆ ಮತ್ತು ಸಾರ್ವಜನಿಕರ ಪರದಾಟ:
ಭೂಕುಸಿತದ ಪರಿಣಾಮವಾಗಿ ಪ್ರಮುಖ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ವ್ಯತ್ಯಯಗೊಂಡಿದ್ದು, ದಿನನಿತ್ಯ ಭಾರಿ ಟ್ರಾಫಿಕ್ ದಟ್ಟಣೆ ಉಂಟಾಗಿದೆ. ಇದರಿಂದ ಶಾಲಾ ಮಕ್ಕಳು, ಹಿರಿಯ ನಾಗರಿಕರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸಂಚಾರ ನಡೆಸಲು ಹರಸಾಹಸಪಡುವಂತಾಗಿದೆ.
ವ್ಯಾಪಾರ-ವ್ಯವಹಾರಗಳ ಮೇಲೆ ತೀವ್ರ ಹೊಡೆತ (ಶೇ. 60 ರಷ್ಟು ಕುಸಿತ):
ಈಗಾಗಲೇ ಮಳೆಗಾಲದ ಹಿನ್ನೆಲೆಯಲ್ಲಿ ವ್ಯಾಪಾರ-ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದರ ಜೊತೆಗೆ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಮಡಿಕೇರಿ ನಗರದ ವ್ಯಾಪಾರವು ಶೇಕಡ 60 ರಷ್ಟು ಕುಸಿದು, ವರ್ತಕರು ಮತ್ತು ವ್ಯಾಪಾರಸ್ಥರು ತೀವ್ರವಾದ ಆರ್ಥಿಕ ನಷ್ಟ ಹಾಗೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಳೆಗಾಲದ ಈ ಕಷ್ಟದ ಸಮಯದಲ್ಲಿ ವ್ಯಾಪಾರ ಸಂಪೂರ್ಣ ಸ್ತಬ್ಧಗೊಂಡಂತಾಗಿದೆ.
ತುರ್ತು ಮನವಿ ಹಾಗೂ ಒತ್ತಾಯ: ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯು ಕೂಡಲೇ ಎಚ್ಚೆತ್ತುಕೊಂಡು ಹೆಚ್ಚುವರಿ ಕೆಲಸಗಾರರನ್ನು ನೇಮಿಸಿ, ಹಗಲಿರುಳು ಶ್ರಮಿಸಿ ಈ ರಸ್ತೆ ದುರಸ್ತಿ ಕಾಮಗಾರಿಯನ್ನು ನಾಲ್ಕೈದು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮುಗಿಸಬೇಕು ರಸ್ತೆಯನ್ನು ಸುರಕ್ಷಿತವಾಗಿ ಮರುಸಂಚಾರಕ್ಕೆ ಕೂಡಲೇ ಅನುವು ಮಾಡಿಕೊಡಬೇಕು.
ನಗರದಲ್ಲಿ ಉಂಟಾಗಿರುವ ತೀವ್ರ ಟ್ರಾಫಿಕ್ ಸಮಸ್ಯೆಯನ್ನು ಮತ್ತು ವ್ಯಾಪಾರಸ್ಥರ ಆರ್ಥಿಕ ನಷ್ಟವನ್ನು ತಪ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವರ್ತಕರ ಸಂಕಷ್ಟವನ್ನು ಪರಿಗಣಿಸಿ ಜಿಲ್ಲಾಡಳಿತ ಹಾಗೂ ನಗರಸಭೆಯು ಈ ಕೂಡಲೇ ಮುತುವರ್ಜಿ ವಹಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.







