
ವಿರಾಜಪೇಟೆ ಜು.24 NEWS DESK : ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಡಿ ಒಟ್ಟು ರೂ.24 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಗಳನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಲೋಕಾರ್ಪಣೆಗೊಳಿಸಿದರು. ಬೊಳ್ಳುಮಾಡುಯಿಂದ ಕಾಕೋಟುಪರಂಬುಗೆ ಹೋಗುವ ರಸ್ತೆ, ಪಾಲಚಂಡ ಐನ್ ಮನೆ ಹಾಗೂ ಮಂಡೆಪಂಡ ಐನ್ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಸ್ಥಳೀಯ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ರಸ್ತೆಗಳನ್ನು ನಿರ್ಮಿಸಿಕೊಡಲಾಗಿದೆ. ಗ್ರಾಮಸ್ಥರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ, ಸರ್ಕಾರದ ವಿವಿಧ ಅಭಿವೃದ್ಧಿ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. :: ಕಾಲೋನಿಗೆ ಭೇಟಿ ಹಾಗೂ ಅಹವಾಲು ಸ್ವೀಕಾರ:: ರಸ್ತೆ ಉದ್ಘಾಟನೆಯ ಬಳಿಕ ಸ್ಥಳೀಯ ನಿವಾಸಿಗಳ ಮನವಿಗೆ ಸ್ಪಂದಿಸಿದ ಶಾಸಕರು, ಹತ್ತಿರದ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದ ಅವರು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ಸ್ಥಳೀಯ ಗ್ರಾಮಸ್ಥರು ನಿರ್ಮಿಸಿರುವ ಮಾದೇರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಲಯ ಅಧ್ಯಕ್ಷರಾದ ಬಟ್ಟಕಾಳಂಡ ರಾಜ ದಿನೇಶ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ತಾಲೂಕು ಘಟಕದ ಅಧ್ಯಕ್ಷರಾದ ರಫೀಕ್, ನಾಸಿರ್, ಬೂತ್ ಅಧ್ಯಕ್ಷರಾದ ಪಾಲಚಂಡ ಸುರೇಶ್ ಹಾಗೂ ಪ್ರಮುಖರಾದ ಮದಂಡ ಅರುಣ್, ರನ್ನು, ಮುಂಡಾಂಡ ಅನಿಲ್, ಚೋಟೆರ ರಮೇಶ್, ಸಚಿನ್ ಕುಟ್ಟಪ್ಪ, ದಿನೇಶ್, ಬಂಟರ ಲೀಲಾದಾರ ರೈ, ಚೀಯಂಡಿರ ಲೋಕೇಶ್ ಮದಯ್ಯ, ಲವ, ಕೂತಂಡ ಅನಿಲ್ ಪೂವಣ್ಣ, ಮಾತಂಡ ಪ್ರಕಾಶ್, ಚರ್ಮಂಡ ಪೊನ್ನಪ್ಪ, ಕಾಮೇಯಂಡ ಹರೀಶ್, ಕುಂಡಚ್ಚಿರ ಮಂಜು ದೇವಯ್ಯ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.









