
ಮಡಿಕೇರಿ ಜು.25 NEWS DESK : ಸುಂಟಿಕೊಪ್ಪ ವ್ಯಾಪ್ತಿಯ ಹೊರೂರು, ಮೋದೂರು ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ನಾಲ್ಕು ಕಾಡಾನೆಗಳನ್ನು ತೀವ್ರ ಕಾರ್ಯಾಚರಣೆಯ ಮೂಲಕ ಚೇರಳ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖಾ ತಂಡ ಯಶಸ್ವಿಯಾಗಿದೆ. ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಹೊರೂರು, ಮೋದೂರು , ಅತ್ತೂರು ನಲ್ಲೂರು ಗ್ರಾಮದ ಕೊರ್ತಿಕಾಡು, ಕಾರೆಕೊಲ್ಲಿ ಗ್ರೀನ್ ಲ್ಯಾಂಡ್, ಮತ್ತಿಕಾಡು, ಟಾಟಾ ಕಾಫಿ ಹಾಗೂ ಮೀನುಕೊಲ್ಲಿ ಶಾಖೆಯ ಚೇರಳ- ಶ್ರೀಮಂಗಲ, ಈರಳ ವಳಮುಡಿ ಗ್ರಾಮಗಳ ಸುತ್ತಮುತ್ತ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳ ದಾಳಿಯಿಂದ ವ್ಯಾಪಕ ಕೃಷಿ ಹಾನಿಯಾಗಿದ್ದು, ಕೃಷಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಗ್ರಾಮಿಣ ಭಾಗಗಳಲ್ಲಿ ನಿರಂತರ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವಂತೆ ಗ್ರಾಮಸ್ಥರ ಆಗ್ರಹದ ಹಿನ್ನೆಲೆಯಲ್ಲಿ ಶನಿವಾರ ಅರಣ್ಯ ಇಲಖಾ ಸಿಬ್ಬಂದಿಗಳು ವ್ಯಾಪಕ ಕಾರ್ಯಾಚರಣೆ ನಡಸುವ ಮೂಲಕ ನಾಲ್ಕು ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸಿಎಫ್ ಮಡಿಕೇರಿ ಅಭಿಷೇಕ್ ವಿ. ಅವರ ಮಾರ್ಗದರ್ಶನದಲ್ಲಿ, ಎಸಿಎಫ್ ನವೀನ್ ಕುಮಾರ್ ಮತ್ತು ವಲಯ ಅರಣ್ಯ ಅಧಿಕಾರಿ ರಕ್ಷಿತ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮಧು ಕುಮಾರ್, ಶಿವಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.









