
ಕುಶಾಲನಗರ ಜು.30 NEWS DESK : ದುಶ್ಚಟಗಳಿಂದ ದೂರವಿದ್ದರೆ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಸಾಧ್ಯ ಎಂಬುದನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ಕನ್ನಡ ಉಪನ್ಯಾಸಕರಾದ ಡಾ.ಜ಼ಮೀರ್ ಅಹಮದ್ ಅವರು ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸೋಮವಾರ ಪೇಟೆ ತಾಲೂಕಿನ ಕೂಡಿಗೆ ವಲಯ ಮತ್ತು ಸರ್ಕಾರಿ ಪ್ರೌಢ ಶಾಲೆ, ತೊರೆನೂರು ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿಯ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಉತ್ತಮ ಆರೋಗ್ಯ, ಉತ್ತಮ ಪರಿಸರ, ಮಾನವೀಯ ಮೌಲ್ಯಗಳನ್ನು ಹೊಂದುವುದು ಸ್ವಸ್ಥ ಸಮಾಜದ ಬಹುಮುಖ್ಯ ಭಾಗವಾಗಿದೆ. ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಹಾನಿ ಮಾಡುವ ಅಭ್ಯಾಸಗಳ ಬಗ್ಗೆ ಅರಿವು ಇರಬೇಕು. ಮಾದಕ ವಸ್ತುಗಳ ವ್ಯಸನ ನಮ್ಮನ್ನು ದಾಸ್ಯರನ್ನಾಗಿ ಮಾಡುವುದಷ್ಟೇ ಅಲ್ಲದೇ ನಮ್ಮ ಅಮೂಲ್ಯವಾದ ಬದುಕನ್ನು ಕಸಿದುಕೊಳ್ಳುತ್ತದೆ. ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಗೌರವಯುತ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣೇಗೌಡ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು, ಶಾಲಾ ಮಕ್ಕಳಿಗೆ ದುಶ್ಚಟಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು. ಮಕ್ಕಳಿಗೆ ತಮ್ಮ ಕುಟುಂಬದ ವಾತಾವರಣದಿಂದಲೇ ಉತ್ತಮ ಪರಿಸರ, ಒಳ್ಳೆಯ ಗುಣ ನಡತೆಯನ್ನು ನೀಡಲಾಗುತ್ತದೆ. ಸಮಾಜದ ಉತ್ತಮ ಪ್ರಜೆಗಳಾಗಬೇಕಾದರೆ ಮಾದಕ ವಸ್ತುಗಳಿಗೆ ಒಳಗಾಗಬಾರದು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ. ಸರ್ ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕ ಸಿಬ್ಬಂದಿಗಳು ಭಾಗವಹಿಸಿದ್ದರು. ಹಾಗೂ ಸೇವಾಪ್ರತಿನಿಧಿಗಳಾದ ನಾಗವೇಣಿ ಮತ್ತು ಸುಮಲತಾ ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರು ಯತೀಶ್ ಕಾರ್ಯಕ್ರಮ ನಿರೂಪಿಸಿ. ಶಿಕ್ಷಕರುಗಳಾದ ಮಂಜುನಾಥ ಟಿ. ಬಿ. ಸ್ವಾಗತಿಸಿ ಹಾಗೂ ಶ್ರೀಹರ್ಷ ವಂದಿಸಿದರು.









