
ಕುಶಾಲನಗರ ಜು.30 NEWS DESK : ರಾಜ್ಯದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾಯರ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸುವ ಸಂಬಂಧ ಆ.22ರಂದು ಶಿಲಾವಿನ್ಯಾಸ ಕಾರ್ಯಕ್ರಮ ನಡೆಯಲಿದೆ. ನಗರದ ಪುರಸಭೆ ಸಭಾಂಗಣದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ವಿಷಯದ ಕುರಿತು ಚರ್ಚೆ ನಡೆಯಿತು. ಆ.22ರಂದು ಗುಂಡೂರಾಯರ ಪುಣ್ಯಸ್ಮರಣೆಯ ದಿನವಾಗಿದ್ದು, ಅಂದು ಕುಶಾಲನಗರ ಪುರಸಭೆ ಆವರಣದಲ್ಲಿ ಸ್ಥಾಪಿಸಲು ಉದ್ದೇಶ ಹೊಂದಿರುವ ಪ್ರತಿಮೆಯ ಬಗ್ಗೆ ಎಂಜಿನಿಯರ್ ಅರ್ಬಸ್ ಅಹಮದ್ ಅವರು ಸಮಗ್ರ ಮಾಹಿತಿ ಒದಗಿಸಿದರು. ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ವೆಚ್ಚದ ಬಗ್ಗೆ ಚರ್ಚಿಸಲಾಗಿ ಗುಂಡೂರಾಯರ ಪುತ್ರ ಹಾಗೂ ಮಾಜಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಕ್ಷೇತ್ರ ಶಾಸಕರಾದ ಡಾ.ಮಂತರ್ ಗೌಡ ಸಹಕಾರ ನೀಡುವ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಹೇಳಿದರು. ಉಳಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ಗುಂಡೂರಾಯರ ಅಭಿಮಾನಿಗಳ ಮೂಲಕ ದೇಣಿಗೆ ಸಂಗ್ರಹದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಪ್ರತಿಮೆ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾಗಿ ಕ್ಷೇತ್ರದ ಶಾಸಕರು ಮತ್ತು ಸಂಚಾಲಕರಾಗಿ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್.ಗಿರೀಶ್ ಅವರ ನೇತೃತ್ವದಲ್ಲಿ ಮುಂದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆ ಒಮ್ಮತದಿಂದ ನಿರ್ಣಯ ಕೈಗೊಂಡಿತು. ಗುಂಡೂರಾಯರ ಒಡನಾಡಿಗಳಾದ ನಿವೃತ್ತ ಶಿಕ್ಷಕರು ಎಂ.ಹೆಚ್.ನಜೀರ್ ಅಹಮದ್ ಅವರು ಗುಂಡೂರಾಯರೊಂದಿಗೆ ಅಂದಿನ ತಮ್ಮ ಒಡನಾಟದ ಬಗ್ಗೆ ತಿಳಿಸಿದರು. ಸಭೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್.ಗಿರೀಶ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಗುಂಡೂರಾಯರ ಆಪ್ತ ಸಹಾಯಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಎಂ.ಎಚ್.ಫಜಲುಲ್ಲಾ ಕುಶಾಲನಗರ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪ್ರಮುಖರು. ರಾಯರ ಅಭಿಮಾನಿಗಳು, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.









