
ಮಡಿಕೇರಿ, ಜು.30 NEWS DESK : ಬ್ರಹ್ಮಗಿರಿ ಸಹೋದಯ ಕೊಡಗು ವತಿಯಿಂದ ಸಿಬಿಎಸ್‌ಇ ಅಂತರಶಾಲಾ ಪೋಸ್ಟರ್ ರಚನಾ ಸ್ಪರ್ಧೆಯು ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ನಡೆಯಿತು. ಕೊಡಗು ಸೇರಿದಂತೆ ವಿವಿಧ ಭಾಗಗಳ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆ, ಸೃಜನಶೀಲತೆ ಹಾಗೂ ಸಾಮಾಜಿಕ ಅರಿವನ್ನು ಪ್ರತಿಬಿಂಬಿಸುವ ಪೋಸ್ಟರ್‌ಗಳನ್ನು ರಚಿಸುವ ಮೂಲಕ ಗಮನ ಸೆಳೆದರು. ಸ್ಪರ್ಧೆಯನ್ನು ಕಿರಿಯ (ಜೂನಿಯರ್) ಹಾಗೂ ಹಿರಿಯ (ಸೀನಿಯರ್) ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಕಿರಿಯ ವಿಭಾಗದಲ್ಲಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಅರ್ಹಾನ್ ಅಹ್ಮದ್ ಪ್ರಥಮ, ಕೆವಿಜಿ ಐಪಿಎಸ್, ಸುಳ್ಯದ ಲಿಕೇಶ್ ಪಿ.ಜೆ. ದ್ವಿತೀಯ ಹಾಗೂ ಅಂಕುರ್ ಪಬ್ಲಿಕ್ ಶಾಲೆಯ ಹೇಶ್ವಿ ಪೊನ್ನಮ್ಮ ತೃತೀಯ ಸ್ಥಾನ ಪಡೆದರು. ಹಿರಿಯ ವಿಭಾಗದಲ್ಲಿ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸುಳ್ಯದ ಪ್ರತೀಕ್ಷಾ ಪ್ರಥಮ, ಎಎಲ್‌ಜಿ ಕ್ರೆಸೆಂಟ್ ಶಾಲೆಯ ರಿಷಾ ಫಾತಿಮಾ ದ್ವಿತೀಯ ಹಾಗೂ ಅಂಕುರ್ ಪಬ್ಲಿಕ್ ಶಾಲೆಯ ಲಿಪಿ ಮಾದಪ್ಪ ತೃತೀಯ ಬಹುಮಾನಕ್ಕೆ ಭಾಜನರಾದರು. ಸ್ಪರ್ಧೆಗೆ ಜನರಲ್ ತಿಮ್ಮಯ್ಯ ಶಾಲೆಯ ಕಲಾ ಶಿಕ್ಷಕರಾದ ಭರತ್ ಹಾಗೂ ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು ಶಾಲೆಯ ಕಲಾ ಶಿಕ್ಷಕಿ ಸರೋಜ ಘಾಣತೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ಕಲ್ಪನಾಶಕ್ತಿ, ಸೃಜನಶೀಲತೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಶಾಲೆಗಳು, ತೀರ್ಪುಗಾರರು, ಶಿಕ್ಷಕರು ಹಾಗೂ ಸಂಘಟಕರಿಗೆ ಬ್ರಹ್ಮಗಿರಿ ಸಹೋದಯ ಕೊಡಗು ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಾಮಾಜಿಕ ಜಾಗೃತಿ ಹಾಗೂ ಕಲೆಯ ಮೇಲಿನ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಮಹತ್ವದ ವೇದಿಕೆಯಾಗಿವೆ ಎಂದು ಸಂಘಟಕರು ಅಭಿಪ್ರಾಯಪಟ್ಟರು.









