
ಮಡಿಕೇರಿ NEWS DESK ಆ.16 : ಕಲೆ, ಸಾಹಿತ್ಯ ಮತ್ತು ಸಂಗೀತವು ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾಷೆ ಮತ್ತು ಗಡಿಗಳನ್ನು ಮೀರಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಶಕ್ತಿ ಇವುಗಳಿಗೆ ಇದೆಯೆಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಟ್ರಸ್ಟಿ ಜಿ.ಚಿದ್ವಿಲಾಸ್ ದೃಢವಾಗಿ ನುಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ವಿವಿಧ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕೊಡಗು ಪತ್ರಿಕಾ ಭವನದಲ್ಲಿ ಆಯೋಜಿತ ದಿವಂಗತ ಎಸ್.ಜಾನಕಿಯವರಿಗೆ ಪುಷ್ಪ ನಮನ-ನುಡಿ ನಮನ- ಗಾನ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ ಮತ್ತು ಕಲೆಗಳು ಜನರ ಮನಸ್ಸಿನಲ್ಲಿ ಏಕತೆಯ ಭಾವನೆಯನ್ನು ಮೂಡಿಸುತ್ತವೆ.ಜಾತಿ, ಧರ್ಮ ಹಾಗೂ ಪ್ರಾದೇಶಿಕ ಭೇದಗಳನ್ನು ಮರೆಸಿ ಜನರನ್ನು ಒಂದೇ ವೇದಿಕೆಗೆ ತರುತ್ತವೆ. ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಅಮೂಲ್ಯ ಕೊಡುಗೆ ನೀಡಿರುವ ಸಂಗೀತಗಾರರ ಸಾಧನೆಯ ಗುರುತಿಸುವಿಕೆ ಆಗದಿರುವುದು ಬೇಸರದ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಭಾರತೀಯ ಚಿತ್ರ ಸಂಗೀತದ ಇತಿಹಾಸದಲ್ಲಿ ಅಳಿಸಲಾಗದ ಹೆಸರಾಗಿರುವ ಎಸ್.ಜಾನಕಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಮೂಲಕ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿoದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು. ಮಡಿಕೆರಿ ತಾಲ್ಲೂಕು ಕಸಾಪ ಅದ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು ಎಸ್.ಜಾನಕಿ ಅವರ ಪುಷ್ಪ ನಮನ ಗೀತೆ ಹಾಡಿದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗಾಯಕರಿಗೆ ಪ್ರಶಂಸನಾ ಪತ್ರ ವಿತರಿಸಿದರು. ರಂಜಿತ್ ಕವಲಪಾರ ಕಾರ್ಯಕ್ರಮ ನಿರ್ವಹಿಸಿದರು. ಕೆ.ತಿಮ್ಮಪ್ಪ ಸ್ವಾಗತಿಸಿ, ರೇವತಿ ರಮೇಶ್ ವಂದಿಸಿದರು. ಗಾಯನ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಯಕರು ಎಸ್.ಜಾನಕಿ ಅವರ ಹಾಡಿರುವ ಹಾಡುಗಳನ್ನು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು. ಇದೇ ಸಂದರ್ಭ ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.









