
ಮಡಿಕೇರಿ ಆ.17 NEWS DESK : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಂತದಲ್ಲಿ ಒಟ್ಟು ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಯಿತಲ್ಲದೆ, ಸ್ವತಃ ಸಿದ್ದರಾಮಯ್ಯ ಅವರೆ ಪ್ರಕರಣದಡಿ 87 ಕೋಟಿ ರೂ. ದುರುಪಯೋಗವಾಗಿರುವುದನ್ನು ಒಪ್ಪಿಕೊಂಡಿದ್ದರು. ಒಟ್ಟು ಪ್ರಕರಣ ತನಿಖಾ ಹಂತದಲ್ಲಿ ಇರುವಾಗಲೇ ಆರೋಪಿ ಸ್ಥಾನದಲ್ಲಿರುವ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವವರೆಗೆ ಬಿಜೆಪಿ ಪಕ್ಷ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲಿದೆ. ಆದಷ್ಟು ಶೀಘ್ರ ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ದಾಖಲಿಸಬೇಕೆಂದು ಕೆ.ಜಿ.ಬೋಪಯ್ಯ ಒತ್ತಾಯಿಸಿದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಪಿ., ಉಪಾಧ್ಯಕ್ಷ ಮಹೇಶ್ ಜೈನಿ, ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ವಿ.ಕೆ.ಲೋಕೇಶ್, ಆರ್.ಕೆ.ಚಂದ್ರು, ಬಿ.ಕೆ.ಅರುಣ್ ಕುಮಾರ್, ಕನ್ನಂಡ ಸಂಪತ್, ಬಿ.ಕೆ.ಜಗದೀಶ್, ಅರುಣ್ ಶೆಟ್ಟಿ, ಕನ್ನಿಕೆ, ಉಮಾ ಪ್ರಭು, ಜಿ.ಪಂ ಮಾಜಿ ಅಧ್ಯಕ್ಷ ಹರೀಶ್, ಮನು ಮಂಜುನಾಥ್, ಪಿ.ಎಂ.ರವಿ, ಬೊಳ್ಳಜಿರ ಬಿ.ಅಯ್ಯಪ್ಪ, ನೆಲ್ಲೀರ ಚಲನ್, ಜಿ.ಎಂ.ಸತೀಶ್ ಪೈ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.









