
ಮಡಿಕೇರಿ ಆ.17 NEWS DESK : ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದ್ದರೂ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಸಿದ್ದಾಪುರ ಸಮೀಪದ ಮಾಲ್ದಾರೆಯ ಘಟ್ಟದಳ್ಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನು ಕಿತ್ತು ಕಛೇರಿಯ ಒಳನುಗ್ಗುವ ಪ್ರಯತ್ನಕ್ಕೆ ಮುಂದಾದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಈ ಸಂದರ್ಭ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ ನಡೆಯಿತು. ಪರಿಸ್ಥಿತಿ ಕೈಮೀರಬಹುದೆನ್ನುವ ಕಾರಣದಿಂದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಕರೆಸಲಾಯಿತು.
ಈ ಸಂದರ್ಭ ಪ್ರತಿಭಟನಾಕಾರರ ಬಳಿಗೆ ಬಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಮಾಲ್ದಾರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮಡಿಕೇರಿಗೆ ತಂದ ಉದ್ದೇಶವೇನು. ಕಾಡಾನೆ ಮಾನವ ಸಂಘರ್ಷ ತಡೆಯಲು ತಮಗೆ ಸಾಧ್ಯವಾಗುವುದಿಲ್ಲ ಎಂದಾದಲ್ಲಿ ಕೆಲಸ ಬಿಟ್ಟು ಹೋಗಿ, ಇಲ್ಲವೆ ವರ್ಗಾವಣೆ ಪಡೆದು ಕೊಡಗಿನಿಂದ ಹೊರ ಹೋಗಿ ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಆನೆ ದಾಳಿಯನ್ನು ತಡೆಯಲಾಗದವರು, ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಸಹಕಾರ ಪಡೆಯುತ್ತಿದ್ದಾರೆ, ಪ್ರಸ್ತುತ ಕಾಡಾನೆಗಳ ಹಾವಳಿ ಜಿಲ್ಲೆಯಾದ್ಯಂತ ಕಂಡು ಬರುತ್ತಿದೆ. ಇದರಿಂದ ಸಾಕಷ್ಟು ಜೀವಹಾನಿಯೂ ಸಂಭವಿಸುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಯಡವನಾಡಿನಲ್ಲಿ ಕಾಡಾನೆ ದಾಳಿ ಪ್ರಕರಣದ ಬಳಿಕ ಕಾಡಾನೆಗಳನ್ನು ಸ್ಥಳಾಂತರಿಸುವುದಾಗಿ ತಿಳಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಆ ನಿಟ್ಟಿನ ಪ್ರಯತ್ನ ನಡೆದಿಲ್ಲ. ಇದಕ್ಕೆ ಕಾರಣವೇನು, ನಿಮ್ಮ ಸಂಕಷ್ಟಗಳೇನು ಎಂಬುವುದನ್ನು ತಿಳಿಸುವಂತೆ ಆಗ್ರಹಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಅವರು ಮಾತನಾಡಿ, ವರ್ಷದ ಹಿಂದೆಯಷ್ಟೆ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿಯೊಬ್ಬಾಕೆ ಸಾವನ್ನಪ್ಪಿದ್ದಳು. ಆ ಹಂತದಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳದಿರುವುದೇ ಇಂದು ಸಮಸ್ಯೆ ಗಂಭೀರತೆಯನ್ನು ಪಡೆಯಲ್ಲು ಮತ್ತು ಜೀವಹಾನಿ ಹೆಚ್ಚಾಗಲು ಕಾರಣವೆಂದು ಆರೋಪಿಸಿದರು. *ಸಭೆ ನಡೆಸಿ*
ಕಾಡಾನೆ ದಾಳಿ ಸಮಸ್ಯೆಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಪಕ್ಷಗಳು ಹಾಗೂ ಪ್ರಮುಖರನ್ನು ಒಳಗೊಂಡಂತೆ ಸಭೆಯೊಂದನ್ನು ಇದೇ ಆ.20ರ ಒಳಗಾಗಿ ಕರೆಯಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದರು. *ಶೀಘ್ರ ಕಾರ್ಯಾಚರಣೆ* ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಸೋನಲ್ ವೃಷ್ಣಿ ಅವರು ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ ಇದೇ ಆ.22ಕ್ಕೆ ಸಭೆ ನಡೆಸುವ ಪ್ರಯತ್ನ ಮಾಡಲಾಗುವುದು ಮತ್ತು ಮೂರು ಕಾಡಾನೆಗಳ ಸೆರೆಗೆ ಮಂಗಳವಾರದಿಂದಲೇ ಕಾರ್ಯಾಚರಣೆÉ ಆರಂಭಿಸಲಾಗುವುದು ಎಂದರು. ಕಾಡಾನೆ ಹಾವಳಿ ತಡೆಗೆ 8ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ನಡೆಯಲಿದೆ. ಹೆಚ್ಚುವರಿ 8 ಕಿ.ಮೀ. ಕಾಮಗಾರಿಗೆ ವಿಸ್ತøತ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯ 560 ಗ್ರಾಮಗಳ ಪೈಕಿ 340 ಗ್ರಾಮಗಳಲ್ಲಿ ಕಾಡಾನೆ ಹಾವಳಿ ಇದ್ದು, ಇದನ್ನು ತಡೆಗಟ್ಟುವ ಸಲುವಾಗಿ ಅಗತ್ಯ ಮ್ಯಾಪಿಂಗ್ ಮಾಡಿ ಯೋಜನೆಯನ್ನು ರೂಪಿಸಲಾಗುತ್ತದೆ. ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಕಾಡಾನೆಗಳ ಆಹಾರವಾಗಿರುವ ಬಿದಿರು ಬೆಳೆಯುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.










