
ಸುಂಟಿಕೊಪ್ಪ, ಆ.17 NEWS DESK : ನಾಕೂರು–ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ, ಅಡಿಕೆ ಹಾಗೂ ತೆಂಗಿನ ಮರಗಳನ್ನು ನಾಶಪಡಿಸಿದೆ ಎಂದು ಪ್ರಗತಿಪರ ಕೃಷಿಕ ಹೆರೂರು ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಭಾನುವಾರ ಚಂದ್ರಶೇಖರ್ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿ ಕಟಾವಿಗೆ ಬಂದಿದ್ದ ಸುಮಾರು 20 ಫಸಲು ಭರಿತ ಅಡಿಕೆ ಮರಗಳು, ರೋಬಸ್ಟಾ ಕಾಫಿ ಗಿಡಗಳು ಹಾಗೂ ತೆಂಗಿನ ಮರಗಳನ್ನು ಬುಡಸಮೇತ ಕಿತ್ತು ನಾಶಪಡಿಸಿವೆ. ಇದರಿಂದ ರೂ.80 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೂ ಇದೇ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಸುಮಾರು 100 ಅಡಿಕೆ ಮರಗಳನ್ನು ಬುಡಸಮೇತ ಮುರಿದು ನಾಶಪಡಿಸಿದ್ದವು. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಆ ಘಟನೆಯ ನೋವು ಮಾಸುವ ಮುನ್ನವೇ ಇದೀಗ ಮತ್ತೆ ಕಟಾವಿಗೆ ಬಂದಿದ್ದ ಕಾಫಿ ಹಾಗೂ ಅಡಿಕೆ ಬೆಳೆ ನಾಶವಾಗಿರುವುದು ಕೃಷಿಕರಿಗೆ ಮತ್ತಷ್ಟು ಸಂಕಷ್ಟ ತಂದಿದೆ.
ರೈತರು ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದೆ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈ ಬಾರಿ ಕಾಫಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದ್ದರೂ ಕಾಡಾನೆಗಳು ಬೆಳೆಗಳನ್ನು ನಾಶಪಡಿಸುತ್ತಿವೆ ಎಂದು ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಿಂದಾಗ್ಗೆ ಕಾಡಾನೆಗಳು ತೋಟಗಳಿಗೆ ಲಗ್ಗೆಯಿಡುತ್ತಿರುವುದರಿಂದ ಕೃಷಿಕರು ನಿರಂತರವಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.
ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸುವುದಾಗಿ ಕೃಷಿಕರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಕಾಡಾನೆಗಳ ನಿರಂತರ ಹಾವಳಿ, ಆನೆ–ಮಾನವ ಸಂಘರ್ಷ ನಿಯಂತ್ರಣದಲ್ಲಿನ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಪರಿಹಾರ ವಿತರಣೆಯಲ್ಲಿನ ವಿಳಂಬ ಧೋರಣೆಯನ್ನು ಖಂಡಿಸಿ ರೈತ ಸಂಘದ ವತಿಯಿಂದ ಕುಶಾಲನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತಾಪಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರೈತ ಸಂಘದ ಮುಖಂಡ ಎನ್.ಸಿ.ಪೊನ್ನಪ್ಪ ಮನವಿ ಮಾಡಿದ್ದಾರೆ.









