
ಮಡಿಕೇರಿ ಆ.17 NEWS DESK : ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ನೀಡಲಾಗುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಪುತ್ರಿ ಡಾ. ಅನುಶ್ರೀ ಅವರ ‘ಹ್ಯಾಪಿಟೀತ್ ಡೆಂಟಲ್ ಕ್ಲಿನಿಕ್’ ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳನ್ನು ಒಳಗೊಂಡ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ, ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಉಪಸಂಪಾದಕ ಉಜ್ವಲ್ ರಂಜಿತ್ ಅವರ ‘ನೋವಿಂದ ನರಳುತ್ತಿರುವ ಗಜರಾಜ’ ಚಿತ್ರ ಆಯ್ಕೆಯಾಗಿದೆ. ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಅತ್ಯುತ್ತಮ ವೀಡಿಯೋಗ್ರಫಿಗಾಗಿ ನೀಡಲಾಗುವ ಪ್ರಶಸ್ತಿಗೆ ಕೊಡಗು ಚಾನೆಲ್‌ನ ಕ್ಯಾಮೆರಾಮನ್ ಹನೀಫ್ ಅವರ ವೀಡಿಯೋ ಆಯ್ಕೆಯಾಗಿದೆ. ಗುಂಡುಕುಟ್ಟಿ ಎಸ್ಟೇಟ್ ಮಾಲೀಕ ಜಿ.ಎಂ..ಮಹೇಂದ್ರ ಅವರು ತಮ್ಮ ತಂದೆ ಜಿ.ಎಂ. ಮೋಹನ್ ಹೆಸರಿನಲ್ಲಿ ನೀಡುವ ದತ್ತಿನಿಧಿ ಪ್ರಶಸ್ತಿ ಕಾಫಿ ಉದ್ಯಮದ ಕುರಿತ ವರದಿಗೆ ವಿನೋದ್ ಮೂಡಗಡ್ಡೆ ಅವರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾಫಿ ಬೆಳೆಯಿಂದ ಹಸನಾದ ಕೃಷಿಕ ವರದಿ ಪ್ರಶಸ್ತಿ ಪಡೆದುಕೊಂಡಿದೆ. ದೇವನಹಳ್ಳಿಯ ಸಮಾಜಸೇವಕ ಮಂಡಿಬೆಲೆ ರಾಜಣ್ಣ ಅವರು ತಮ್ಮ ಪೋಷಕರಾದ ಮಂಡಿಬೆಲೆ ದ್ಯಾವಮ್ಮ–ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಆದಿವಾಸಿಗಳ ಬದುಕಿಗೆ ಸಂಬಂಧಿಸಿದ ಮಾನವೀಯ ವರದಿ ಪ್ರಶಸ್ತಿಗೆ, ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಎನ್ ಕೆ ಸುಕುಮಾರ್ ಅವರ ‘ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಗಳಿಗೆ ನೂತನ ಮನೆ’ ವರದಿ ಆಯ್ಕೆಯಾಗಿದೆ. ಆ. 19ರಂದು ಬುಧವಾರ ಬೆಳಗ್ಗೆ 10.30 ಗಂಟೆಗೆ, ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘ ಹಾಗೂ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುವ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ತಿಳಿಸಿದ್ದಾರೆ.








