
ಮಡಿಕೇರಿ, ಆ.17 NEWS DESK : ಕೊಡವ ಜನಪದೀಯ ಸಾಹಿತ್ಯವನ್ನು ಜೀವಂತವಾಗಿಡುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಡವ ಪುಸ್ತಕ ಪತ್ತಾಯ’ ಯೋಜನೆಯನ್ನು ವಿದ್ಯಾಸಂಸ್ಥೆಗಳು, ಐನ್‌ಮನೆಗಳು, ಸಂಘ-ಸಂಸ್ಥೆಗಳು ಹಾಗೂ ಸಮಾಜಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಅರಮೇರಿ ಕಳಂಚೇರಿಯ ಶ್ರೀ ಶಾಂತಮಲ್ಲ ಸ್ವಾಮೀಜಿ ವಿದ್ಯಾಸಂಸ್ಥೆಯಲ್ಲಿ ಅಕಾಡೆಮಿಯ 17ನೇ ‘ಕೊಡವ ಪುಸ್ತಕ ಪತ್ತಾಯ’ ಅನಾವರಣ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರಾದ ಶಾಂತಮಲ್ಲ ಸ್ವಾಮೀಜಿಯವರ 29ನೇ ಗುರುಸ್ಮರಣೆಯ ಅಂಗವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನ ನೆಲದಲ್ಲಿ ಅನಾದಿ ಕಾಲದಿಂದಲೂ ವಿಭಿನ್ನ ಸಂಸ್ಕೃತಿ ಹಾಗೂ ಸಂಸ್ಕಾರಯುತ ಸಾಮಾಜಿಕ ಬದುಕು ಬೆಳೆದು ಬಂದಿದೆ. ಸರ್ವರೂ ಸಹೋದರತೆ, ಸೌಹಾರ್ದತೆ ಹಾಗೂ ಸಮಾನತೆಯಿಂದ ಬದುಕು ರೂಪಿಸಿಕೊಂಡಿರುವುದು ದೇಶಕ್ಕೆ ಮಾದರಿಯಾಗಿದೆ. ಶಾಲಾ ಜೀವನದಲ್ಲೇ ಮಕ್ಕಳು ಇಂತಹ ಮೌಲ್ಯಗಳನ್ನು ಅರಿತುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಶಾಲಾ ಪಠ್ಯದ ಜತೆಗೆ ಜೀವನ ಮೌಲ್ಯಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಗ್ರಂಥಾಲಯದಲ್ಲಿ ಕತೆ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಕೃತಿಗಳನ್ನು ಓದಲು ಅವಕಾಶ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಕತೆ, ಕಾದಂಬರಿ ಹಾಗೂ ವೈಚಾರಿಕ ಲೇಖನಗಳು ಬದುಕಿನ ಹಲವು ಮಗ್ಗುಲುಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತವೆ. ಶಿಕ್ಷಣವು ಕೇವಲ ಪಠ್ಯಕ್ಕೆ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು. ಪುಸ್ತಕ ಪತ್ತಾಯವನ್ನು ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಸ್ಥೆಯ ಪ್ರಾಂಶುಪಾಲರಾದ ಬಲ್ಲಚಂಡ ಕುಸುಂ ಟಿಟೊ ಅವರಿಗೆ ಹಸ್ತಾಂತರಿಸಲಾಯಿತು. ಪತ್ತಾಯ ಸ್ಥಾಪನೆಯ ಪ್ರಯುಕ್ತ ವಿದ್ಯಾಸಂಸ್ಥೆ ವತಿಯಿಂದ ಅಕಾಡೆಮಿಗೆ ರೂ.10 ಸಾವಿರದ ಚೆಕ್ ನೀಡಲಾಯಿತು. ಇದೇ ಸಂದರ್ಭದಲ್ಲಿ ಅಲ್ಲಪ್ಪಿರ ಹಾಗೂ ಮಂಡೇಟಿರ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ‘ದುಡಿಗಳು’ನ್ನು ಮಠಾಧೀಶರ ಮೂಲಕ ಗೌರವಪೂರ್ವಕವಾಗಿ ಹಸ್ತಾಂತರಿಸಲಾಯಿತು. :: ಸತ್‌ಚಿಂತನೆ ವಿಕಸಿತ ಭಾರತಕ್ಕೆ ನಾಂದಿ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ :: ವಿದ್ಯಾಸಂಸ್ಥೆಯ ಮುಖ್ಯಸ್ಥರೂ, ಮಠಾಧಿಪತಿಗಳೂ ಆದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕೊಡವ ಭಾಷೆಯು ಸಾಮಾಜಿಕ ಸಂವಹನದ ಪ್ರಮುಖ ಮಾಧ್ಯಮವಾಗಿದ್ದು, ಇದರ ಮೂಲಕ ಸಮಾಜದೊಂದಿಗೆ ಬೆರೆಯಲು ಹಾಗೂ ಸರ್ವರ ಪ್ರೀತಿ ಸಂಪಾದಿಸಲು ಸಾಧ್ಯವಾಗಿದೆ ಎಂದರು. ಕೊಡವ ಭಾಷೆ ಪ್ರಾಚೀನವಾಗಿದ್ದು, ಕೃಷಿ ಆಧಾರಿತ ಸಂಸ್ಕೃತಿಯೊಂದಿಗೆ ಕೊಡಗಿನ ಪ್ರಮುಖ ಹಬ್ಬಗಳು ಇಲ್ಲಿನ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಸಾಕ್ಷಿಯಾಗಿವೆ. ಸ್ವಚ್ಛಂದ ಹಾಗೂ ಸುಸ್ಥಿರ ಸಮಾಜವನ್ನು ನಿರ್ಮಿಸುವುದರ ಜತೆಗೆ 2047ರೊಳಗೆ ವಿಕಸಿತ ಭಾರತವನ್ನು ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಒಳ್ಳೆಯ ಯೋಚನೆ, ಒಳ್ಳೆಯ ಮಾತು ಹಾಗೂ ಉತ್ತಮ ಪರಿಸರವನ್ನು ರೂಪಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು. :: ಮಕ್ಕಳಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ: ಮಲ್ಲೇಶ ಸ್ವಾಮೀಜಿ :: ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗಬಾರದು. ಹೆಚ್ಚಿನ ಅಂಕ ಗಳಿಸಿದ ಮಕ್ಕಳನ್ನು ಶಿಕ್ಷಕರು ಮೆಚ್ಚುತ್ತಾರೆ. ಆದರೆ ಅದರ ಜತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವೂ ಬೆಳೆಯಬೇಕು ಎಂದರು.
ಉತ್ತಮ ಅಂಕ ಗಳಿಸಿ, ಉತ್ತಮ ಉದ್ಯೋಗ ಪಡೆದು ವಿದೇಶಗಳಲ್ಲಿ ಉನ್ನತ ಹುದ್ದೆ ಹಾಗೂ ಉತ್ತಮ ಸಂಬಳ ಪಡೆಯಬಹುದು. ಆದರೆ ಅದೇ ವಿದ್ಯೆ ನೀಡಿದ ಪೋಷಕರು, ಉತ್ತಮ ಶಿಕ್ಷಣ ನೀಡಿದ ಶಿಕ್ಷಕರು ಹಾಗೂ ಈ ನೆಲದ ಸಂಸ್ಕೃತಿಯಿಂದ ದೂರವಾಗಿ, ಪೋಷಕರ ಅಂತಿಮ ದಿನಗಳಲ್ಲಿಯೂ ಅವರೊಂದಿಗೆ ಇರಲು ಸಾಧ್ಯವಾಗದಿದ್ದರೆ ಅಂತಹ ಶಿಕ್ಷಣದಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಕೊಡಗಿನ ಹಲವೆಡೆ ಮಠಗಳ ಆಸ್ತಿಗಳಿದ್ದು, ಅವುಗಳನ್ನು ಸಂರಕ್ಷಿಸಿಕೊಂಡು ಹೋಗುವ ಕೆಲಸವಾಗಬೇಕು. ಅರಮೇರಿ ಮಠದ ಸ್ವಾಮೀಜಿಗಳು ‘ಕೊಡವ ಸ್ವಾಮೀಜಿ’ಗಳಾಗಿದ್ದು, ಅವರಿಗೆ ಕೊಡವ ಭಾಷೆ ಹಾಗೂ ಇಲ್ಲಿನ ಜನಜೀವನದ ಅರಿವಿದೆ ಎಂದು ಪ್ರಶಂಸಿಸಿದರು. ಆಯಾ ಪ್ರದೇಶಗಳ ವಿಭಿನ್ನ ಸಂಸ್ಕೃತಿ ಹಾಗೂ ಜೀವನ ಕ್ರಮಗಳನ್ನು ಮಕ್ಕಳು ಅರಿತುಕೊಳ್ಳಬೇಕು. ಇದನ್ನು ಪೋಷಕರು ಕಲಿಸಬೇಕು, ಶಿಕ್ಷಕರು ತಿಳಿಹೇಳಬೇಕು. ಇದರಿಂದ ಮಕ್ಕಳಲ್ಲಿ ತಮ್ಮ ಊರು, ನಾಡು ಹಾಗೂ ದೇಶದ ಮೇಲಿನ ಪ್ರೀತಿ ಮತ್ತು ಭಕ್ತಿ ಅಚಲವಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಹಂತ ಶಿವಲಿಂಗ, ಬಸವಲಿಂಗ ಶಿವಯೋಗಿ ಸ್ವಾಮೀಜಿ, ನಿಶ್ಚಲ ನಿರಂಜನ ದೇಶಿಕೇಂದ್ರ, ಮುತ್ತಿನಕಂತೆ ಸ್ವಾಮೀಜಿ, ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕಾವೇರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.









