
ಮಡಿಕೇರಿ NEWS DESK ಆ.18 : ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತವಾಗಿ ಅಧ್ಯಯನ ನಡೆಸುವ ಮೂಲಕ ಅದಕ್ಕೆ ಒದಗಿ ಬಂದಿರುವ ಅಪಾಯವನ್ನು ತಪ್ಪಿಸಿ ಸಂರಕ್ಷಿಸುವತ್ತ ಮುಂದಾಗಬೇಕೆ0ದು ಸಮಾಜ ಸೇವಕ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಅವರು ಕರೆ ನೀಡಿದ್ದಾರೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಹೆಬ್ಬಾಲೆ ಪ್ರೌಢಶಾಲೆಯ ಮೇಲ್ಚಾವಣಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಅರಿತು ಅದರಂತೆ ನಡೆಯುವ ಮೂಲಕ ಅದರ ಮೌಲ್ಯವನ್ನು ಗೌರವಿಸಬೇಕು. ಕಳೆದ ಹಲವು ವರ್ಷಗಳಿಂದಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸದೇ ಚುನಾಯಿತ ಸರಕಾರಗಳು ನಿರ್ಲಕ್ಷ್ಯ ವಹಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಮುದ್ದಪ್ಪ ವಿಷಾದಿಸಿದರು. ಹೆಬ್ಬಾಲೆಯ ಮಾಜಿ ಯೋಧ ಹೆಚ್.ಎಸ್.ಕೃಷ್ಣಪ್ಪ ಅವರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದಷ್ಟೇ ಬಳಸಬೇಕು. ವಿದ್ಯೆಗಿಂತಲೂ ಮುಖ್ಯವಾಗಿ ಉತ್ತಮ ಸಂಸ್ಕಾರಗಳನ್ನು ಹೊಂದಬೇಕು. ದೇಶಸೇವೆಗೆ ಸದಾ ಕಟಿಬದ್ಧರಾಗಿರಬೇಕು ಎಂದು ಕರೆ ನೀಡಿದರು. ಸಮಾಜ ಸೇವಕ ಹಾಗೂ ಉದ್ಯಮಿ ನಾಪಂಡ ಮುತ್ತಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಶೈಕ್ಷಣಿಕ ಗುರಿ ಸಾಧಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಡಾ.ಸAಗೀತಾ ಮುದ್ದಪ್ಪ ಅವರು ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ನೀಡಿದರು. ನಿವೃತ್ತ ಯೋಧ ಪುಟ್ಟೇಗೌಡ ಮಾತನಾಡಿದರು. *ಸನ್ಮಾನ* ಶಿಥಿಲಾವಸ್ಥೆಯಲ್ಲಿದ್ದ ಹೆಬ್ಬಾಲೆ ಪ್ರೌಢಶಾಲೆಗೆ ಕಾಯಕಲ್ಪ ನೀಡಿದ ಶಾಲೆಯ ಹಳೆಯ ವಿದ್ಯಾರ್ಥಿ ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹೆಬ್ಬಾಲೆ ಪ್ರೌಢಶಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಅವರು ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಸೇವೆ ಅವಿಸ್ಮರಣೀಯವೆಂದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಲ್ಲಿ ರಾಜಶೇಖರ್, ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಬ್ರಮಣ್ಯ, ಖಜಾಂಚಿ ಉಮೇಶ್ ಭಟ್, ಕಾಲೇಜು ವಿಭಾಗದ ಪ್ರಾಂಶುಪಾಲ ವಿಜಯಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಪ್ರಸನ್ನರೆಡ್ಡಿ, ಮಹದೇವ, ಬಾಂಬೆ ಪುಟ್ಟರಾಜು, ಶ್ರೀಧರ, ಚಂದ್ರಕುಮಾರ್, ಸುದರ್ಶನ್, ರವಿ, ವಿಜಯಕುಮಾರ್ ಇದ್ದರು. ಶಾಲಾ ಶಿಕ್ಷಕರಾದ ಕವಿತಾ ಪುಟ್ಟೇಗೌಡ ಹಾಗೂ ಸಿ.ಡಿ.ಲೋಕೇಶ್ ನಿರೂಪಿಸಿದರು, ವಿಜಯಕುಮಾರ್ ಸ್ವಾಗತಿಸಿದರು.









