
ಸುಂಟಿಕೊಪ್ಪ, ಆ.18 NEWS DESK : ಅಪ್ರಾಪ್ತ ಮಕ್ಕಳನ್ನು ಶಾಲೆಗೆ ಕಳುಹಿಸದೆ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಅನಧಿಕೃತವಾಗಿ ದತ್ತು ಪಡೆಯುವುದು ಅಥವಾ ದತ್ತು ನೀಡುವುದು ಹಾಗೂ ಮಕ್ಕಳನ್ನು ಭಿಕ್ಷಾಟನೆಗೆ ಬಳಸುವುದು ಕಾನೂನುಬಾಹಿರ ಕೃತ್ಯವಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಧು ಹೇಳಿದರು. ಕಾನ್‌ಬೈಲ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಕಾವೇರಿ ಜ್ಞಾನವಿಕಾಸ ಕೇಂದ್ರದ ಕಾನ್‌ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಮಂಜಿಕೇರೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳ ರಕ್ಷಣೆಗಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳ ಕುರಿತು ಸಾರ್ವಜನಿಕರು ಅರಿವು ಹೊಂದಿರಬೇಕು. ತಮ್ಮ ಸುತ್ತಮುತ್ತಲಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಭಿಕ್ಷಾಟನೆ, ಶಾಲೆಯಿಂದ ಹೊರಗುಳಿದಿರುವ ಮಕ್ಕಳು, ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಮೆಗೆ ಬಳಸುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ತೋಟದ ಲೈನ್ ಮನೆಗಳು ಹಾಗೂ ಹಾಡಿಗಳಲ್ಲಿ ವಾಸಿಸುವ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಆರ್ಥಿಕ ಸಂಕಷ್ಟದ ಕಾರಣದಿಂದ ಮಕ್ಕಳನ್ನು ತೋಟ, ಅಂಗಡಿ, ಮುಂಗಟ್ಟು ಮತ್ತಿತರ ಕಡೆಗಳಲ್ಲಿ ಕೆಲಸಕ್ಕೆ ಸೇರಿಸುವುದು ಕಾನೂನುಬಾಹಿರವಾಗಿದ್ದು, ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಹೇಳಿದರು. ಮಕ್ಕಳ ಮೇಲೆ ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ದೈಹಿಕ ಹಿಂಸೆ ಪ್ರಕರಣಗಳು ಕಂಡುಬಂದಲ್ಲಿ ಮಹಿಳಾ ಸಹಾಯವಾಣಿ 181ಕ್ಕೆ ಕರೆ ಮಾಡುವಂತೆ ಮಧು ಸಲಹೆ ನೀಡಿದರು. ತಲಕಾವೇರಿ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾನ್‌ಬೈಲ್ ಜವಾಬ್ದಾರಿ ತಂಡದ ಸದಸ್ಯೆ ಬೇಬಿ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಹಾಗೂ ಸೇವಾ ಪ್ರತಿನಿಧಿ ಯಶೋಧ ಉಪಸ್ಥಿತರಿದ್ದರು.









