

ಮಡಿಕೇರಿ, ಆ.18 NEWS DESK : ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ಮಿನಿ ಉದ್ಯೋಗ ಮೇಳಕ್ಕೆ ಚಾಲನೆ ದೊರೆಯಿತು. ಪೊನ್ನಂಪೇಟೆ ತಹಶೀಲ್ದಾರ್ ಸಿ.ಎಸ್.ಸಂಜನಾ ಅವರು ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ ಅಗತ್ಯ. ಮಿನಿ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು. ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಅದೇ ರೀತಿ ಯುವನಿಧಿ ಯೋಜನೆಯೂ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದೆ. ಇಂದಿನ ಯುವಶಕ್ತಿಯೇ ದೇಶವನ್ನು ಮುನ್ನಡೆಸಬೇಕಾಗಿದ್ದು, ಯಾರೂ ನಿರುದ್ಯೋಗದಂತಹ ಸಮಸ್ಯೆಗೆ ಒಳಗಾಗಬಾರದು. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಸದಾ ಮುಂದುವರಿಯಲಿದೆ ಎಂದು ಹೇಳಿದರು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮಾತನಾಡಿ, ಮಿನಿ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿದ್ದು, ಹಲವಾರು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ. ಉದ್ಯೋಗಾಕಾಂಕ್ಷಿಗಳು ತಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮೇಳದಲ್ಲಿ 8ರಿಂದ 10 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ಸುಮಾರು 53 ಉದ್ಯೋಗಾಕಾಂಕ್ಷಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರು, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಬಿ. ಮಂಜುನಾಥ್, ಪೊನ್ನಂಪೇಟೆ ಯೋಜನಾಧಿಕಾರಿ ನಂದೀಶ್, ತಾಲ್ಲೂಕು ಉದ್ಯೋಗ ಸಂಯೋಜಕ ಮದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.









