
ಮಡಿಕೇರಿ NEWS DESK : ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಕಾಮಗಾರಿಯನ್ನು ಮಡಿಕೇರಿ ನಗರಸಭೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಹಾಗೂ ಪ್ರತಿಮೆ ನಿರ್ಮಾಣ ಸಮಿತಿ ಸದಸ್ಯ ಎಚ್.ಎಸ್. ಪ್ರೇಮ್ ಕುಮಾರ್ ವೀಕ್ಷಿಸಿದರು. ಬೆಂಗಳೂರಿಗೆ ಭೇಟಿ ನೀಡಿದ ಅವರು, ಪ್ರತಿಮೆ ನಿರ್ಮಾಣದ ಶಿಲ್ಪಿ ಕೃಷ್ಣ ನಾಯಕ್ ಅವರೊಂದಿಗೆ ಕಾಮಗಾರಿಯ ಪ್ರಗತಿ ಹಾಗೂ ನಿರ್ಮಾಣದ ಗುಣಮಟ್ಟವನ್ನು ಪರಿಶೀಲಿಸಿದರು. ಪ್ರತಿಮೆ ನಿರ್ಮಾಣದ ವಿವಿಧ ಹಂತಗಳ ಕುರಿತು ಶಿಲ್ಪಿಯಿಂದ ಮಾಹಿತಿ ಪಡೆದು, ಅಗತ್ಯ ಸಲಹೆಗಳನ್ನು ನೀಡಿದರು.
ನಮ್ಮ ಸಮುದಾಯದ ಬಹುದಿನಗಳ ಕನಸಾಗಿರುವ ಅಂಬೇಡ್ಕರ್ ಪ್ರತಿಮೆ ಸುಂದರವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಪ್ರತಿಮೆ ನಿರ್ಮಾಣದ ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಿ, ಕಾಮಗಾರಿಯನ್ನು ನಿಗದಿತ ಗುಣಮಟ್ಟದಲ್ಲಿ ಪೂರ್ಣಗೊಳಿಸುವ ಕುರಿತು ಚರ್ಚಿಸಲಾಯಿತು.








