
ಮಡಿಕೇರಿ NEWS DESK ಆ.20 : ಅಯ್ಯಂಗೇರಿಯ ಗೌಡ ಯುವ ಒಕ್ಕೂಟದ ವತಿಯಿಂದ ಆ.29 ಮತ್ತು 30ರಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲದ ಮುಂಭಾಗದಲ್ಲಿರುವ ಕುದುಕುಳಿ ಕುಶಾಲಪ್ಪನವರ ಗದ್ದೆಯಲ್ಲಿ ಪ್ರಥಮ ವರ್ಷದ ರಾಜ್ಯ ಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆ. ಗೌಡ ಯುವ ಒಕ್ಕೂಟದ ಅಧ್ಯಕ್ಷ ಭರತ್ ಕಾವೇರಿಮನೆ ಅವರು ಕ್ರೀಡಾಕೂಟದ ವಿವರಗಳನ್ನು ನೀಡಿ, ಆ.29 ರಂದು ಕೆಸರುಗದ್ದೆಯ ಕ್ರಿಕೆಟ್ ಪಂದ್ಯಾವಳಿ ಆಯೋಜಿತವಾಗಿದ್ದು, ಈಗಾಗಲೆ 24 ತಂಡಗಳು ನೋಂದಣಿಯಾಗಿದೆ. 3 ಓವರ್‌ಗಳಿಗೆ ಸೀಮಿತವಾದ ಈ ಪಂದ್ಯಾವಳಿಯನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿ ವಿಜೇತ ತಂಡಕ್ಕೆ 10 ಸಾವಿರ ರೂ., ದ್ವಿತೀಯ 8 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಬಹುಮಾನವಾಗಿ ವಿತರಿಸಲಾಗುತ್ತದೆಂದರು. ಆ.30 ರಂದು ಬೆಳಗ್ಗೆ 10 ಗಂಟೆಗೆ ಮಹಿಳೆಯರ ವಿಭಾಗದ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಇದನ್ನು ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿ ವಿಜೇತ ತಂಡಕ್ಕೆ 10 ಸಾವಿರ, ದ್ವಿತೀಯ 8 ಸಾವಿರ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆಂದರು. ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯನ್ನು ಒಕ್ಕೂಟದ ಖಜಾಂಚಿ ಕಾವೇರಿಮನೆ ಸುಗು ಅವರು ಉದ್ಘಾಟಿಸಲಿದ್ದು, ವಿಜೇತ ತಂಡಕ್ಕೆ 10 ಸಾವಿರ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 8 ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ. ಮಹಿಳೆೆಯರು ಮತ್ತು ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದ ವಿಜೇತ ತಂಡಗಳಿಗೆ 15 ಸಾವಿರ ನಗದು, ದ್ವ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 10 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪಂದ್ಯಾವಳಿಯನ್ನು ಒಕ್ಕೂಟದ ಕ್ರೀಡಾಧ್ಯಕ್ಷರಾದ ಬಾರಿಕೆ ಅರುಣ್ ಉದ್ಘಾಟಿಸಲಿದ್ದಾರೆಂದರು. ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ- ಕೆಸರು ಗದ್ದೆ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್‌ಕೆಜಿ-ಯುಕೆಜಿ ಮತ್ತು 1ನೇ ತರಗತಿ ವಿಭಾಗ, 2 ರಿಂದ 4ನೇ ತರಗತಿ ಮಕ್ಕಳ ವಿಭಾಗ, 5 ರಿಂದ 7ನೇ ತರಗತಿವರೆಗಿನ ಮಕ್ಕಳ ವಿಭಾಗ, ಪ್ರೌಢಶಾಲಾ ವಿಭಾಗ, ಪದವಿ ಮತ್ತು ಪದವಿಪೂರ್ವ ವಿಭಾಗ, 30 ವರ್ಷ ಮೇಲ್ಪಟ್ಟವರ ವಿಭಾಗ, 50 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆಯೆಂದು ಮಾಹಿತಿಯನ್ನಿತ್ತರು. ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಅಧ್ಯಕ್ಷ ಭರತ್ ಕಾವೇರಿಮನೆ ಅವರನ್ನು ಮೊ.8431515404 ಮೂಲಕ ಸಂಪರ್ಕಿಸಬಹುದು. ಸಮಾರೋಪ- ಸಮಾರೋಪ ಸಮಾರಂಭ ಸಂಜೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಬಾರಿಕೆ ರತನ್, ಖಜಾಂಚಿ ದೀಪಕ್ ಬಾರಿಕೆ, ಉಪಾಧ್ಯಕ್ಷ ಬಾರಿಕೆ ಲೋಕೇಶ್, ಕ್ರೀಡಾಧ್ಯಕ್ಷ ಬಾರಿಕೆ ಅರುಣ್ ಹಾಗೂ ಕಾವೇರಿಮನೆ ಸುಗು ಉಪಸ್ಥಿತರಿದ್ದರು.









