


ಕುಶಾಲನಗರ ಆ.20 NEWS DESK : ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಶ್ರಯದಲ್ಲಿ ಡಿ.25 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್’ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದರು. ಕುಶಾಲನಗರದ ಕನ್ನಿಕಾ ಇಂಟರ್‌ನ್ಯಾಷನಲ್ ಆವರಣದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪೀಳಿಗೆಯನ್ನು ಅಂತರರಾಷ್ಟ್ರೀಯ ಮಟ್ಟದ ಉದ್ಯಮಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಸಮಾವೇಶದಲ್ಲಿ ಗುಣಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಉದ್ಯೋಗ ಅರಸುವ ಬದಲು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಲು ಯುವಜನತೆಗೆ ಅಗತ್ಯವಾದ ಮಾರ್ಗದರ್ಶನ, ತರಬೇತಿ ಹಾಗೂ ಪ್ರೇರಣೆಯನ್ನು ನೀಡಲಾಗುವುದು. ನವೋದ್ಯಮಗಳ ಸ್ಥಾಪನೆ, ಈಗಿರುವ ವ್ಯಾಪಾರ-ಉದ್ಯಮಗಳ ಅಭಿವೃದ್ಧಿ, ಆರ್ಥಿಕ ಪಾಲುದಾರಿಕೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಸದ್ಬಳಕೆ, ಆಮದು-ರಫ್ತು, ರಿಯಲ್ ಎಸ್ಟೇಟ್, ಆಧುನಿಕ ಉದ್ಯಮಗಳು, ಸ್ಪರ್ಧಾತ್ಮಕ ಸವಾಲುಗಳು, ಕೃಷಿ ಚಟುವಟಿಕೆಗಳ ವೈವಿಧ್ಯತೆ, ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಹೊಸ ಆವಿಷ್ಕಾರಗಳ ಅಳವಡಿಕೆ ಕುರಿತು ಪರಿಣಿತರಿಂದ ಮಾಹಿತಿ ಮತ್ತು ಸಲಹೆ ನೀಡಲಾಗುವುದು ಎಂದು ಹೇಳಿದರು.ವಿಶ್ವದ ಪ್ರತಿಷ್ಠಿತ ಪ್ರೇರಣಾದಾಯಕ ಭಾಷಣಕಾರರು, ಅನುಭವಿಗಳು ಹಾಗೂ ಸಾಧಕರು ಯುವಜನತೆಗೆ ಮಾರ್ಗದರ್ಶನ ನೀಡಲಿದ್ದಾರೆ. ದಕ್ಷಿಣ ಭಾರತದ ಐದು ರಾಜ್ಯಗಳ ಸಮುದಾಯದ ಗಣ್ಯರು, ಪ್ರತಿನಿಧಿಗಳು, ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಸಚಿವರು ಹಾಗೂ ರಾಜ್ಯದ ಜನಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಸುಮಾರು ರೂ.15 ಕೋಟಿ ವೆಚ್ಚದಲ್ಲಿ ನಡೆಯಲಿರುವ ಮೂರು ದಿನಗಳ ಸಮಾವೇಶದಲ್ಲಿ 1.5 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇಂತಹ ಸಮಾವೇಶ ನಡೆಸುವ ಉದ್ದೇಶವಿದ್ದು, ಮುಂದಿನ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ನವೋದ್ಯಮಗಳ ಸ್ಥಾಪನೆ ಹಾಗೂ 5 ಲಕ್ಷ ಉದ್ಯೋಗಗಳ ಸೃಷ್ಟಿ ಗುರಿಯನ್ನು ಹೊಂದಲಾಗಿದೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕೇವಲ ಸಂಘಟನೆಯಾಗಿ ಉಳಿಯದೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಕಲ್ಪವೃಕ್ಷದಂತೆ ಕಾರ್ಯನಿರ್ವಹಿಸುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.40 ಕೋಟಿಗೂ ಅಧಿಕ ಮೊತ್ತವನ್ನು ಅಶಕ್ತರು ಹಾಗೂ ಅಗತ್ಯವಿರುವವರಿಗೆ ನೆರವಿನ ರೂಪದಲ್ಲಿ ನೀಡಲಾಗಿದೆ ಎಂದರು. ಯುವಜನರಲ್ಲಿ ಉದ್ಯಮಗಳನ್ನು ನಡೆಸುವ ಆತ್ಮವಿಶ್ವಾಸ ಹಾಗೂ ಸವಾಲುಗಳನ್ನು ಎದುರಿಸುವ ನೈಪುಣ್ಯ ಹೆಚ್ಚಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಯುವಕ-ಯುವತಿ ಹಾಗೂ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. :: ಆ.23ರಂದು ಸಂಕಲ್ಪ ಯಾತ್ರೆ :: ಸಮಾವೇಶದ ಹಿನ್ನೆಲೆಯಲ್ಲಿ ಆ.23ರಂದು ಬೆಳಿಗ್ಗೆ 10.30ಕ್ಕೆ ಕುಶಾಲನಗರದಲ್ಲಿ ಗ್ಲೋಬಲ್ ಆರ್ಯವೈಶ್ಯ ಸಮಾವೇಶದ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ಬೈಚನಹಳ್ಳಿಯಿಂದ ಆರಂಭವಾಗುವ ಯಾತ್ರೆ ದ್ವಿಚಕ್ರವಾಹನ ರ್ಯಾಲಿ, ಪಾದಯಾತ್ರೆ ಹಾಗೂ ಸಾಮೂಹಿಕ ಸಭೆಗಳ ಮೂಲಕ ಮುಖ್ಯರಸ್ತೆ, ಕುಶಾಲನಗರ ರಥಬೀದಿ ಮಾರ್ಗವಾಗಿ ಆಂಜನೇಯ ದೇವಾಲಯದವರೆಗೆ ಸಾಗಲಿದೆ. ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಾಗೇಂದ್ರ ಪ್ರಸಾದ್ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸಮಾವೇಶದ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪಿ.ಎಸ್. ಪ್ರಶಾಂತ್, ಕನ್ನಿಕಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಅಮೃತ್ ರಾಜ್ ಹಾಗೂ ವಾಸವಿ ಸಮಾಜದ ನಿರ್ದೇಶಕ ಕೆ.ಜೆ. ಸತೀಶ್ ಉಪಸ್ಥಿತರಿದ್ದರು.









