
ಸುಂಟಿಕೊಪ್ಪ, ಆ.20 NEWS DESK : ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಡಿಸಿಸಿ ಬ್ಯಾಂಕ್) ಸುಂಟಿಕೊಪ್ಪ ಶಾಖೆಯು 2025-26ನೇ ಸಾಲಿನಲ್ಲಿ ರೂ.51.70 ಕೋಟಿ ಠೇವಣಿ ಸಂಗ್ರಹಿಸಿ, ರೂ.42.01 ಕೋಟಿ ಸಾಲ ವಿತರಿಸುವ ಮೂಲಕ ರೂ.1.29 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದ್ದಾರೆ. ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿ 25 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. 2025-26ನೇ ಸಾಲಿನಲ್ಲಿ ಬ್ಯಾಂಕ್ ವಿವಿಧ ರೀತಿಯ ರೂ.2,043 ಕೋಟಿ ಠೇವಣಿ ಸಂಗ್ರಹಿಸಿದ್ದು, ಸದಸ್ಯರಿಗೆ ರೂ.1,772 ಕೋಟಿ ವಿವಿಧ ರೀತಿಯ ಸಾಲಗಳನ್ನು ವಿತರಿಸಿದೆ. ಈ ಅವಧಿಯಲ್ಲಿ ರೂ.22.39 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು. ಸಾಲ ವಸೂಲಾತಿಯಲ್ಲಿ ಶೇ.98ರಷ್ಟು ಪ್ರಗತಿ ಸಾಧಿಸಲಾಗಿದ್ದು, ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ಶೇ.1.12ರಷ್ಟಿದೆ ಎಂದು ತಿಳಿಸಿದರು. ಬ್ಯಾಂಕ್ ಈ ಬಾರಿ ಹೆಚ್ಚಿನ ಲಾಭ ಗಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳ ಪೈಕಿ ಅತ್ಯಧಿಕ ಶೇ.20ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ. ಇದರಿಂದ ಹೆಚ್ಚಿನ ಲಾಭವನ್ನು ಸದಸ್ಯ ಸಹಕಾರ ಸಂಘಗಳಿಗೆ ವರ್ಗಾಯಿಸಲು ಸಾಧ್ಯವಾಗಿದೆ ಎಂದು ಕೊಡಂದೇರ ಪಿ. ಗಣಪತಿ ಹೇಳಿದರು. ಸಭೆಯಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ನಿರ್ದೇಶಕರಾದ ಕ್ಲೈವ್ ಪೊನ್ನಪ್ಪ, ಕೆ.ಎಸ್. ಮಂಜುನಾಥ್, ರಮೇಶ್ ಚಂಗಪ್ಪ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಪಿ.ಪಿ. ಲೀಲಾವತಿ, ಎನ್.ಸಿ. ದಿಕರ, ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಎಂ. ಉತ್ತಪ್ಪ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣವಟ್ಟಿರ ಬಿ. ಬೆಳ್ಳಿಯಪ್ಪ ಹಾಗೂ ಅಧ್ಯಕ್ಷರ ಆಪ್ತ ಸಹಾಯಕ ಸಿ.ಎಸ್. ಗಣಪತಿ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸುಂಟಿಕೊಪ್ಪ ಶಾಖೆಯ ವ್ಯವಸ್ಥಾಪಕ ಸತೀಶ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಸಹಾಯಕ ಶಾಖಾ ವ್ಯವಸ್ಥಾಪಕಿ ಎಂ.ಮಮತಾ ವಂದಿಸಿದರು.









