
ಮಡಿಕೇರಿ NEWS DESK ಆ.22 : ಉಮ್ಮತ್ ಒನ್ ಕೊಡಗು ಸಂಘಟನೆಯ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ 1501ನೇ ಜನ್ಮದಿನಾಚರಣೆಯ ಪ್ರಯುಕ್ತ ಕೊಡಗು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಸಿ.ಎಂ.ಹಮೀದ್ ಮೌಲವಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾದಿ ಪೈಗಂಬರವರು ಮನುಕುಲಕ್ಕೆ ನೀಡಿದ ಕೊಡುಗೆಗಳೇನು ಎಂಬ ವಿಷಯವನ್ನ ಮುಂದಿಟ್ಟುಕೊ0ಡು ಸ್ಪರ್ಧಿಗಳು ಕನ್ನಡದಲ್ಲಿ ಪ್ರಬಂಧವನ್ನು ಬರೆದು ಸೆ.5ರ ಒಳಗಾಗಿ ಉಮ್ಮತ್ ಒನ್ ಕೊಡಗು ಸಂಘಟನೆಯ ಮಡಿಕೇರಿ ಕಚೇರಿಗೆ ತಲುಪಿಸಬೇಕೆಂದು ಕೋರಿದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ 15 ಸಾವಿರ ರೂ., ದ್ವಿತೀಯ 10 ಸಾವಿರ, ತೃತೀಯ 5 ಸಾವಿರ ರೂ. ಬಹುಮಾನವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳನ್ನು ಸಂಘಟನೆಯ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಲಾಗುತ್ತದೆ. ಪ್ರಬಂಧ ಸ್ಪರ್ಧೆಯ ಪ್ರಮುಖ ಉದ್ದೇಶ ಪ್ರವಾಸಿ ಮೊಹಮ್ಮದ್ ಪೈಗಂಬರ್ ಅವರು ಜಗತ್ತಿಗೆ ಸಾರಿದ ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯದ ಪರಿಕಲ್ಪನೆ, ಧಾರ್ಮಿಕ ಸ್ವಾತಂತ್ರ್ಯ ಮಹಿಳೆಯರ ಹಕ್ಕುಗಳು ಸೇರಿದಂತೆ ಅವರ ಸಂದೇಶಗಳನ್ನು ಜಗತ್ತಿಗೆ ಸಾರುವುದೇ ಆಗಿದೆಯೆಂದು ತಿಳಿಸಿದರು.









