
ಮಡಿಕೇರಿ NEWS DESK ಆ.23 : ಮಡಿಕೇರಿ ರೋಟರಿ ವತಿಯಿಂದ ಎಂ.ಇ.ಎಸ್. ಮೂರ್ನಾಡು ಪ್ರೌಢ ಶಾಲೆಯಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಶಾಲೆಯ ಕಾರ್ಯದರ್ಶಿ ಪಿ.ಹರೀಶ್ ದೇವಯ್ಯ ಅವರ ನೇತೃತ್ವದಲ್ಲಿ ಕಾವೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ನ ಚೇರ್ ಮನ್ ರೊ. ಈರಮಂಡ ಹರಿಣಿ ವಿಜಯ್ ಅವರು ಇಂಟರ್ಯಾಕ್ಟ್ ಕ್ಲಬ್ ನ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಶಿಸ್ತು, ಜವಾಬ್ದಾರಿ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಕ್ಲಬ್ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಎಸ್.ಡಿ. ಅವರು ಇಂಟರ್ಯಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಕ್ಲಬ್ ನ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಂಡವಾಗಿ ಕೆಲಸ ಮಾಡುವ ಗುಣ, ಸಂವಹನ ಹಾಗೂ ನಿರ್ಧಾರ ಕೈಗೊಳ್ಳುವ ಕೌಶಲ್ಯಗಳು ವೃದ್ಧಿಯಾಗಲಿದೆ. ಸಮಾಜಸೇವೆ, ಪರಿಸರ ಸಂರಕ್ಷಣೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಲಿದೆ ಎಂದು ತಿಳಿಸಿದರು. ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಇನ್ ಸ್ಟಲೇಶನ್ ಆಫೀಸರ್ ರೊ. ಈಶ್ವರ್ ಭಟ್ ನೆರವೇರಿಸಿದರು. ನೂತನ ಸಮಿತಿಗೆ ರೋಟರಿ ಬ್ಯಾಡ್ಜ್ ಗಳನ್ನು ವಿತರಿಸಿ ಪ್ರಮಾಣ ವಚನ ಬೋಧಿಸಿದರು. ರೋಟರಿಯಂತಹ ಸೇವಾ ಸಂಸ್ಥೆಗಳೊ0ದಿಗೆ ಕೈಜೋಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ, ಶಿಸ್ತು ಹಾಗೂ ಜವಾಬ್ದಾರಿಯ ಗುಣಗಳು ಬೆಳೆಸಿಕೊಳ್ಳಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೋಟಿವೇಷನಲ್ ಸ್ಪೀಕರ್ ಹಾಗೂ ಚೀಫ್ ಪಿಆರ್‌ಒ, ಡಿಆರ್‌ಡಿಒ ಮಿನಿಸ್ಟ್ರಿ ಆಫ್ ಡಿಫೆನ್ಸ್ ಜೈ ಪ್ರಕಾಶ್ ರಾವ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ಗುಣ ನಡತೆಯ ಪ್ರೇರಣೆ ನೀಡಿದರು. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸರಳತೆ, ಶಿಸ್ತು, ದೇಶಪ್ರೇಮ ಹಾಗೂ ವ್ಯಕ್ತಿತ್ವದ ಕುರಿತು ಮಾತನಾಡಿದ ಅವರು, ರಕ್ಷಣಾ ಸಚಿವಾಲಯದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊ0ಡರು. ಮೊಬೈಲ್, ಇಂಟರ್‌ನೆಟ್ ಹಾಗೂ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳನ್ನು ಜ್ಞಾನ ಮತ್ತು ಸೃಜನಶೀಲತೆಯ ಬೆಳವಣಿಗೆಗೆ ಬಳಸಿಕೊಳ್ಳಬೇಕು. ಸಮಯವನ್ನು ಸದುಪಯೋಗಪಡಿಸಿಕೊಂಡು ಹೊಸ ವಿಷಯಗಳನ್ನು ಕಲಿಯಬೇಕು. ಅಬ್ದುಲ್ ಕಲಾಂ ಅವರಂತೆ ದೊಡ್ಡ ಕನಸು ಕಾಣುವುದರ ಜೊತೆಗೆ ಪರಿಶ್ರಮ, ಶಿಸ್ತು ಹಾಗೂ ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಡಿಕೇರಿ ರೋಟರಿ ಅಧ್ಯಕ್ಷ ರೊ.ಮನೋಹರ್ ಕಾಮತ್ ಅವರು ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ ಸ್ಥಾಪನೆಗೆ ಸಹಕರಿಸಿದ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿಗಳ ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಇಂಟರ್ಯಾಕ್ಟ್ ಕ್ಲಬ್ ಉತ್ತಮ ವೇದಿಕೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿಯ ಕಾರ್ಯದರ್ಶಿ ರೊ.ಬಿ.ಎಂ.ಸೋಮಣ್ಣ ಉಪಸ್ಥಿತರಿದ್ದರು. ಶಾಲೆಯ ಇಂಟರ್ಯಾಕ್ಟ್ ಕೋಆರ್ಡಿನೇಟರ್ ಆಗಿ ಕಾವೇರಮ್ಮ ಸಿ.ಬಿ., ಅಧ್ಯಕ್ಷರಾಗಿ ಜಿಯಾ ಫಾತಿಮಾ, ಉಪಾಧ್ಯಕ್ಷರಾಗಿ ಅಫೀಫ, ಕಾರ್ಯದರ್ಶಿಯಾಗಿ ಪುಣ್ಯ ಪೊನ್ನಮ್ಮ ಹಾಗೂ ಸಹ ಕಾರ್ಯದರ್ಶಿಯಾಗಿ ನಿದಾ ಫಾತಿಮಾ ಆಯ್ಕೆಯಾಗಿದ್ದಾರೆ. ರಿಶಿಕಾ, ನಿದಾ, ಇಂದು, ಅಕ್ಷತಾ ಹಾಗೂ ಆಸುರಾ ಪ್ರಾರ್ಥಿಸಿ ಕಾವೇರಮ್ಮ ಸಿ.ಬಿ. ಸ್ವಾಗತಿಸಿದರು. ಪುಣ್ಯ ಪೊನ್ನಮ್ಮ ಪಿ.ಆರ್. ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕಾವೇರಮ್ಮ ಸಿ.ಬಿ. ಹಾಗೂ ಮಂಗಳಾ ಎ.ಎಂ. ಕಾರ್ಯಕ್ರಮ ನಿರೂಪಿಸಿದರು, ಭುವನೇಶ್ವರಿ ಎಂ. ವಂದಿಸಿದರು.











