
ಮಡಿಕೇರಿ NEWS DESK ಆ.23 : ಮೋಡ ಬಿತ್ತನೆಯಿಂದ ಕೊಡಗು ಜಿಲ್ಲೆಗೆ ಹಾಗೂ ಇಲ್ಲಿನ ಜನರಿಗೆ ಪ್ರಯೋಜನಗಿಂತ ನಷ್ಟವೇ ಹೆಚ್ಚು ಆಗುವುದರಿಂದ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಅಲ್ಲದೆ ಮೋಡ ಬಿತ್ತನೆಯಿಂದ ಆಗುವ ನಷ್ಟವನ್ನು ಸರಕಾರವೇ ತುಂಬಬೇಕು ಎಂದು ಒತ್ತಾಯಿಸುತ್ತದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕ ಸರ್ಕಾರವು ಮುಂಗಾರು ಮಳೆಯ ಕೊರತೆ ಹಾಗೂ ಬರ ಪರಿಸ್ಥಿತಿ ನೀಗಿಸಲು ಅಂದಾಜು ರೂ. 28.52 ಕೋಟಿ ವೆಚ್ಚದಲ್ಲಿ 60 ದಿನಗಳ ಕಾಲ 200 ಗಂಟೆಗಳ ವೈಮಾನಿಕ ಹಾರಾಟದ ‘ಕರ್ನಾಟಕ ತುರ್ತು ಮೋಡ ಬಿತ್ತನೆ ಕಾರ್ಯಕ್ರಮ-2026′ ಅನ್ನು ಘೋಷಿಸಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ. ಇಂದಿನ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಿದರೆ ರೈತರ ಬೆಳೆಗೆ ಹಾನಿಯಾಗಲಿದೆ, ಕೊಳೆ ರೋಗ ಕಾಡಲಿದೆ. ಅತಿಯಾದ ಮಳೆಯಿಂದ ಕೊಡಗಿನ ರಸ್ತೆಗಳು ಮತ್ತಷ್ಟು ಹದಗೆಡಲಿವೆ, ಅಲ್ಲದೆ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾಜ್ಯದ ಹಿತದೃಷ್ಟಿಯಿಂದ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಿರುವ ರಾಜ್ಯ ಸರಕಾರ ಕಾವೇರಿ ನಾಡು ಕೊಡಗಿನ ಜನರ ಹಿತದೃಷ್ಟಿಯನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಮೋಡ ಬಿತ್ತನೆಯಿಂದ ಕೊಡಗಿಗೆ ನಷ್ಟವಾದರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿರುವ ರಾಕೇಶ್ ದೇವಯ್ಯ ಕೊಡಗಿನ ಸಂಕಷ್ಟವನ್ನು ಕೇಳಲು ಹಾಗೂ ಸ್ಪಂದಿಸಲು ವಿಫಲವಾಗಿರುವ ರಾಜ್ಯ ಸರಕಾರ ತಕ್ಷಣ ವಿಶೇಷ ಅನುದಾನ ಮತ್ತು ಬೆಳೆ ನಷ್ಟ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ವರ್ಷ ಕೊಡಗು ಜಿಲ್ಲೆಯ ತುರ್ತು ಕಾಮಗಾರಿಗಳಿಗೆ ಎನ್‌ಡಿಆರ್‌ಎಫ್ ಮೂಲಕ ಮೀಸಲಿಟ್ಟ ಅಂದಾಜು ರೂ.32 ಕೋಟಿಯನ್ನು ಸದುಪಯೋಗಪಡಿಸದೆ ಬೇರೆ ಜಿಲ್ಲೆಗೆ ವರ್ಗಾಯಿಸಿದ್ದಾರೆ ಎನ್ನುವ ಆರೋಪವಿದೆ. ಇದು ಕೊಡಗು ಜಿಲ್ಲೆಗೆ ಮಾಡಿರುವ ದೊಡ್ಡ ಅನ್ಯಾಯವಾಗಿದ್ದು, ಈ ರೀತಿಯ ಮಲತಾಯಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.









