
ಮಡಿಕೇರಿ ಆ.26 NEWS DESK : ಇಂದಿನ ಕಾಲದಲ್ಲಿ ಜನರು ದೊಡ್ಡಸ್ಥಿಕೆಗಿಂತ ಒಳ್ಳೆಯತನಕ್ಕೆ ಹೆಚ್ಚು ಒಲವು ತೋರುತ್ತಾರೆ. ದೊಡ್ಡತನ ಮೆರೆಯುವವರನ್ನು ಸಮಾಜ ಇಷ್ಟಪಡುವುದಿಲ್ಲ. ದೊಡ್ಡಸ್ಥಿಕೆಯಿಂದ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ದೊಡ್ಡತನವನ್ನು ಬಿಟ್ಟು ಒಳ್ಳೆಯತನದೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕರೆ ನೀಡಿದರು. ಬುಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ 18ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಂದು ಸಮುದಾಯದ ಸಂಸ್ಕೃತಿ, ಪದ್ಧತಿ, ಆಚಾರ–ವಿಚಾರ ಹಾಗೂ ಸಂಪ್ರದಾಯಗಳನ್ನು ಕೇವಲ ಪಠ್ಯಪುಸ್ತಕಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವುಗಳನ್ನು ಹಿಂದಿನ ಸಾಹಿತಿಗಳು ಸಾಹಿತ್ಯದ ರೂಪದಲ್ಲಿ ದಾಖಲಿಸಿ ಮುಂದಿನ ಪೀಳಿಗೆಗೆ ನೀಡಿದ್ದಾರೆ. ಪದ್ಧತಿ, ಆಚಾರ–ವಿಚಾರಗಳನ್ನು ದೊಡ್ಡಸ್ಥಿಕೆ ಮೆರೆದು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಅಂತಹ ವ್ಯಕ್ತಿಯನ್ನು ಸಮಾಜ ಇಷ್ಟಪಡುವುದಿಲ್ಲ. ಪಾರಂಪರ್ಯವಾಗಿ ಬಂದಿರುವ ಪದ್ಧತಿ ಹಾಗೂ ಜೀವನಕ್ರಮಗಳನ್ನು ಪ್ರತಿಯೊಬ್ಬರೂ ಕಲಿತು ಅನುಸರಿಸಬೇಕು. ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಕೊಡವ ಸಂಸ್ಕೃತಿಯ ಸಾರವನ್ನು ಒಳಗೊಂಡಿರುವ ಪುಸ್ತಕಗಳನ್ನು ಕೊಡವ ಪುಸ್ತಕ ಪತ್ತಾಯದ ಮೂಲಕ ಸಮಾಜಗಳು, ದೇವನೆಲೆಗಳು ಹಾಗೂ ವಿದ್ಯಾಸಂಸ್ಥೆಗಳಲ್ಲಿ ಇರಿಸಿ, ಮಕ್ಕಳು ಮತ್ತು ಹಿರಿಯರು ಅವುಗಳನ್ನು ಓದಿ ತಿಳಿದುಕೊಳ್ಳುವಂತೆ ಮಾಡುವ ಉದ್ದೇಶದಿಂದ ಪುಸ್ತಕ ಪತ್ತಾಯ ಸ್ಥಾಪಿಸಲಾಗುತ್ತಿದೆ ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮಾತನಾಡಿ, ಹಿಂದಿನ ಸಾಹಿತಿಗಳಾದ ನಡಿಕೇರಿಯಂಡ ಚಿಣ್ಣಪ್ಪ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಹಾಗೂ ಐ.ಮಾ. ಮುತ್ತಣ್ಣ ಅವರು ನೀಡಿದ ಸಾಹಿತ್ಯದಿಂದ ಕೊಡವ ಸಾಹಿತ್ಯ ಇಂದು ಅಗಾಧವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ಕೊಡವ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಬಳಿಕ ಕೊಡವಾಮೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಕೊಡವ ಭಾಷಿಕರಿಗೆ ಅಕಾಡೆಮಿಯಲ್ಲಿ ಅವಕಾಶ ಕಲ್ಪಿಸಿರುವುದು ಸಮಂಜಸವಾಗಿದ್ದು, ಅಕಾಡೆಮಿಯ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದು ಹೇಳಿದರು.
ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಞಾರಂಡ ಜಿ. ಅಯ್ಯಪ್ಪ ಅವರು ಕೊಡವ ಪುಸ್ತಕ ಪತ್ತಾಯವನ್ನು ಅನಾವರಣಗೊಳಿಸಿ ಮಾತನಾಡಿ, ಪುಸ್ತಕವೆಂಬ ಜ್ಞಾನಭಂಡಾರವನ್ನು ಸಮಾಜಗಳಲ್ಲಿ ಸ್ಥಾಪಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಹಿರಿಯರಾದ ನಿವೃತ್ತ ಮುಖ್ಯಶಿಕ್ಷಕಿ ಪಡಿಞಾರಂಡ ದೇವಕಿ ಅಚ್ಚಪ್ಪ ಮಾತನಾಡಿ, ಕೊಡವ ಪುಸ್ತಕ ಪತ್ತಾಯದ ಮೂಲಕ ನಮ್ಮ ಇತಿಹಾಸ, ಪುರಾಣ, ಜಾನಪದ ಹಾಗೂ ಕಲೆಯನ್ನು ಅರಿತುಕೊಳ್ಳಲು ಅನುಕೂಲವಾಗಲಿದೆ. ಕೊಡವ ಭಾಷೆಯಲ್ಲಿ ಪ್ರಕಟವಾಗಿರುವ ಹಲವಾರು ಪುಸ್ತಕಗಳು ಸಂಸ್ಕೃತಿಯ ತಿಳುವಳಿಕೆಗೆ ಕಾರಣವಾಗಿವೆ. ಅಕಾಡೆಮಿಯ ಇಂತಹ ಮೆಚ್ಚುಗೆಯ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕುಂಬೆರ ಹಾಗೂ ಪಂದಿಕಂಡ ಕುಟುಂಬಸ್ಥರಿಗೆ ಮತ್ತು ಪಾರಾಣೆಯ ಬಲ್ಯಾಂಡೆ ಮಂದ್ ಸಮಿತಿಗೆ ದುಡಿಗಳನ್ನು ನೀಡಲಾಯಿತು. ಬಲ್ಯಾಂಡೆ ಮಂದ್ ಸಮಿತಿಯವರು ಬಾಳೋಪಾಟ್ ಹಾಡಿದರೆ, ಹೆಗ್ಗಡೆ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು. ಅಕಾಡೆಮಿ ವತಿಯಿಂದ ಸಮಾಜದ ಅಧ್ಯಕ್ಷರಿಗೆ ನೋಂದಣಿ ಪತ್ರವನ್ನು ಹಸ್ತಾಂತರಿಸಲಾಯಿತು. ಹೆಗ್ಗಡೆ ಸಮಾಜದ ವತಿಯಿಂದ ಅಕಾಡೆಮಿಗೆ ರೂ.10 ಸಾವಿರ ಮೊತ್ತದ ಚೆಕ್‌ನ್ನು ಪುಸ್ತಕ ಪತ್ತಾಯದ ಪ್ರಯುಕ್ತ ನೀಡಲಾಯಿತು. ಅಕಾಡೆಮಿ ಸದಸ್ಯರಾದ ಪಾನಿಕುಟ್ಟಿರ ರಾಧ ಕುಟ್ಟಪ್ಪ, ನಾಪಂಡ ಗಣೇಶ, ಚೆಪ್ಪುಡಿರ ಉತ್ತಪ್ಪ, ಕಂಬೆಯಂಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಪೊನ್ನಿರ ಗಗನ್, ಪಾಡಿ ಇಗ್ಗುತಪ್ಪ ದೇವಸ್ಥಾನ ಸಮಿತಿ ಸದಸ್ಯರಾದ ಪರದಂಡ ವಿಠಲ ಭೀಮಯ್ಯ, ಕುಂಬೆರ ಸಿ. ಪೆಮ್ಮಯ್ಯ, ಪಂದಿಕಂಡ ದಿನೇಶ್, ಅಪ್ಪನೆರವಂಡ ಕಾರ್ಯಪ್ಪ, ಚೆರುಮಂದಂಡ ಸುರೇಶ್, ಅಕಾಡೆಮಿ ಮಾಜಿ ಸದಸ್ಯ ಚರ್ಮಂಡ ಅಪ್ಪುಣು, ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ತೋರೆರ ಮುದ್ದಯ್ಯ, ಹೆಗ್ಗಡೆ ಸಮಾಜದ ನಿರ್ದೇಶಕರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಅಕಾಡೆಮಿ ಮಾಜಿ ಸದಸ್ಯ ಹಾಗೂ ಹೆಗ್ಗಡೆ ಸಮಾಜದ ನಿರ್ದೇಶಕ ಪಡಿಞಾರಂಡ ಪ್ರಭುಕುಮಾರ್ ಮತ್ತು ಮಡಿಕೇರಿ ಆಕಾಶವಾಣಿ ಉದ್ಘೋಷಕಿ ಪೌಡಂಡ ಡೇಸಿ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ ಸ್ವಾಗತಿಸಿ, ವಂದಿಸಿದರು.









