
ಬೆಂಗಳೂರು ಆ.26 NEWS DESK : ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ವಕೀಲರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಬಾರ್ ಕೌನ್ಸಿಲ್‌ಗೆ ನೂತನ ಕಟ್ಟಡ ನಿರ್ಮಾಣ ಹಾಗೂ ವಕೀಲರ ವೆಲ್ಫೇರ್ ನಿಧಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಚರ್ಚೆ ನಡೆಸಿ, ತಮ್ಮ ಬೇಡಿಕೆಗಳು ಮತ್ತು ಅಹವಾಲುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ವಕೀಲರ ವೃತ್ತಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಪರಿಹಾರ, ಕಲ್ಯಾಣ ಕ್ರಮಗಳು ಹಾಗೂ ಬಾರ್ ಕೌನ್ಸಿಲ್‌ನ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವಂತೆ ಸದಸ್ಯರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಸೇರಿದಂತೆ ಬಾರ್ ಕೌನ್ಸಿಲ್‌ನ ಇತರ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.









