ಮಡಿಕೇರಿ, NEWS DESK ಆ.28 : ಮಡಿಕೇರಿ ದಸರಾ ಸಮಿತಿ ನಗರದ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿಗೆ ನಾಂದಿ ಹಾಡಿತು.
ಮಡಿಕೇರಿ ದಸರಾ ಉತ್ಸವ ಅ.11 ರಂದು ಆರಂಭಗೊಳ್ಳಲಿದ್ದು, 21 ರಂದು ವಿಜಯದಶಮಿಯ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ. ರಾಜ್ಯ ಸರಕಾರ ಈಗಾಗಲೇ ಮಡಿಕೇರಿ ದಸರಾ ಸಂಭ್ರಮಕ್ಕೆ 2 ಕೋಟಿ ರೂ. ಅನುದಾನವನ್ನು ಘೋಷಿಸಿದೆ. ದಸರಾ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆ ಅಗತ್ಯ ಸಿದ್ಧತೆಗಾಗಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿ ಕಾರ್ಯೋನ್ಮುಖವಾಗಿವೆ. ಪ್ರತಿವರ್ಷದ ಸಂಪ್ರದಾಯದAತೆ ದಸರಾ ಪೂರ್ವಭಾವಿ ಸಿದ್ಧತೆಗೂ ಮೊದಲು ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಮಿತಿಗಳ ಪ್ರಮುಖರು ಜನೋತ್ಸವದ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾಗಿರುವ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ದಶಮಂಟಪ ಸಮಿತಿ ಅಧ್ಯಕ್ಷ ಪಾಂಡೀರ ಪೂಣಚ್ಚ, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಪದಾಧಿಕಾರಿಗಳಾದ ಚುಮ್ಮಿ ದೇವಯ್ಯ, ಸವಿತಾ ರಾಕೇಶ್, ಬೈ.ಶ್ರೀ ಪ್ರಕಾಶ್, ಅರುಣ್ ಶೆಟ್ಟಿ ಸೇರಿದಂತೆ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳ ಸದಸ್ಯರು, ಹಾಗೂ ಸಾರ್ವಜನಿಕರು ಪೂಜೆಯಲ್ಲಿ ಪಾಲ್ಗೊಂಡರು.








