
ಮಡಿಕೇರಿ, ಆ.29 NEWS DESK : ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶನಿವಾರ ನಡೆಯಿತು. ರಾಜ್ಯ ಸರ್ಕಾರದ ಐದು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಆರ್ಥಿಕ ನೆರವು ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ಹಾಗೂ ಸಾಮಾಜಿಕ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂಬಂಧ ಗೃಹಲಕ್ಷ್ಮಿ ಯೋಜನೆಯ ಧನಸಹಾಯವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಯಾಗಿ ಸಮಾಜದಲ್ಲಿ ಸಕ್ರಿಯರಾಗಿರುವ ಫಲಾನುಭವಿಗಳ ಯಶೋಗಾಥೆಗಳ ವರದಿ, ವಿಡಿಯೋ ಚಿತ್ರೀಕರಣ, ಛಾಯಾಚಿತ್ರ, ಅವರ ಅನಿಸಿಕೆಗಳು ಹಾಗೂ ಸ್ವಯಂ ವಿವರಗಳನ್ನು ಕಚೇರಿಗೆ ಸಲ್ಲಿಸಲು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ, ಗೃಹಲಕ್ಷ್ಮಿ ಯೋಜನೆಯಡಿ ಮೇ ಮಾಹೆಯವರೆಗೆ ಧನಸಹಾಯ ಪಾವತಿಯಾಗಿದ್ದು, ಪ್ರಸ್ತುತ ಜೂನ್ ಮಾಹೆಯವರೆಗಿನ ಧನಸಹಾಯವನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು. ಆಹಾರ ಶಾಖೆಯಿಂದ ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಗ್ರಾಮವಾರು ಮಾಹಿತಿ ಪಡೆದು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮರಣ ದೃಢೀಕರಣ ಪತ್ರ ಸಂಗ್ರಹಿಸಿ ಲಾಗಿನ್ನಿಂದ ಹೆಸರುಗಳನ್ನು ತೆಗೆದುಹಾಕುವ ಕಾರ್ಯ ನಡೆಯುತ್ತಿದೆ. ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 171 ಮೃತ ಫಲಾನುಭವಿಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಲಾಯಿತು. ಸಮಿತಿ ಸದಸ್ಯ ಪ್ರಭು ರೈ ಮಾತನಾಡಿ, ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ ಪ್ರತಿ ತಿಂಗಳು ಮರಣ ದೃಢೀಕರಣದ ಮಾಹಿತಿ ಪಡೆದು ಪರಿಶೀಲಿಸಬೇಕು. ಗೃಹಲಕ್ಷ್ಮಿ ಫಲಾನುಭವಿ ಮರಣ ಹೊಂದಿದ್ದಲ್ಲಿ ಮರಣ ದೃಢೀಕರಣ ಪತ್ರ ಹಾಗೂ ಆಧಾರ್ ಕಾರ್ಡ್ ಪಡೆದು, ಮೃತರ ಬ್ಯಾಂಕ್ ಖಾತೆಗೆ ಯೋಜನೆಯ ಹಣ ಜಮೆಯಾಗುವುದನ್ನು ಸ್ಥಗಿತಗೊಳಿಸಬೇಕು. ಅದೇ ಕುಟುಂಬದಲ್ಲಿ ಅರ್ಹ ಮಹಿಳಾ ಸದಸ್ಯರಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಮಂಜುನಾಥ್ ಮಾತನಾಡಿ, ಯುವನಿಧಿ ಯೋಜನೆಯ ನಿಯಮದಂತೆ ನಿರುದ್ಯೋಗಿಗಳು ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಸ್ವಯಂ ಘೋಷಣೆ ಸಲ್ಲಿಸಿದಲ್ಲಿ ಮಾತ್ರ ಡಿಬಿಟಿ ಮೂಲಕ ಹಣ ಪಾವತಿಯಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಕಚೇರಿಯಿಂದ ಸ್ವೀಕೃತವಾದ ಜೂನ್-2026ರ ಡಿಬಿಟಿ ದತ್ತಾಂಶದ ಪ್ರಕಾರ ಕೊಡಗು ಜಿಲ್ಲೆಯಾದ್ಯಂತ ಒಟ್ಟು 626 ಫಲಾನುಭವಿಗಳು ಡಿಬಿಟಿಗೆ ಅರ್ಹರಾಗಿದ್ದು, ಇವರಲ್ಲಿ 616 ಮಂದಿ ಪದವೀಧರರು ಹಾಗೂ 10 ಮಂದಿ ಡಿಪ್ಲೊಮಾ ಅಭ್ಯರ್ಥಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಹುತೇಕ ಫಲಾನುಭವಿಗಳಿಗೆ ಡಿಬಿಟಿ ಆಗದಿರಲು ಪ್ರಮುಖ ಕಾರಣ ಮಾಸಿಕ ಸ್ವಯಂ ಘೋಷಣೆ ಸಲ್ಲಿಸದಿರುವುದಾಗಿದೆ. ಒಟ್ಟು 472 ಫಲಾನುಭವಿಗಳು ಸ್ವಯಂ ಘೋಷಣೆ ಸಲ್ಲಿಸಿಲ್ಲ. ಅಲ್ಲದೆ, ಮುಖ್ಯ ಕಚೇರಿಯ ದತ್ತಾಂಶದ ಪ್ರಕಾರ ಕೆಲ ಫಲಾನುಭವಿಗಳು ತಾವು ಉದ್ಯೋಗದಲ್ಲಿರುವುದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಭೌತಿಕ ಪರಿಶೀಲನೆ ವೇಳೆ 166 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು. ಸಮಿತಿ ಸದಸ್ಯೆ ಫ್ಯಾನ್ಸಿ ಪಾರ್ವತಿ ಮಾತನಾಡಿ, ಮುಕ್ಕೋಡ್ಲು ಭಾಗಕ್ಕೆ ಹಳೆಯ ಬಸ್ಗಳು ಸಂಚರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಆದ್ದರಿಂದ ಈ ಮಾರ್ಗಕ್ಕೆ ನೂತನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಬಸ್ ಚಾಲಕರು ಸಮಯ ಪಾಲನೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗೃಹಜ್ಯೋತಿ ಯೋಜನೆಯ ಇಲಾಖಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ಶೇ.98.81ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಸರ್ವರ್ ಸಮಸ್ಯೆ ಕುರಿತು ಕ್ರಮ ಕೈಗೊಂಡು, ಈ ಸಂಬಂಧ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಅಧ್ಯಕ್ಷ ಮೋಹನ್ ದಾಸ್ ಸೂಚಿಸಿದರು. ಆಹಾರ ನಿರೀಕ್ಷಕಿ ವೀಣಾ ಮಾತನಾಡಿ, ಸೆಪ್ಟೆಂಬರ್ 1ರಿಂದ 15ರವರೆಗೆ ವಿಶೇಷ ಅಭಿಯಾನ ನಡೆಯಲಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರು ಸೇರ್ಪಡೆ ಮತ್ತು ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರಂಗಪ್ಪ, ಮಿಟ್ಟು ಸೋಮಯ್ಯ, ಪೆರುಮುಂಡ ಮನು ಪೆರಾಜೆ, ದಯಾನಂದ ಮರಗೋಡು ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಉಪಸ್ಥಿತರಿದ್ದರು.









