ಮಡಿಕೇರಿ, NEWS DESK ಆ.29 : ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸುಸ್ಥಿರವಾಗಿ ನಿರ್ವಹಿಸಲು ಹೆಚ್ಚಿನ ಒತ್ತು ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ದಕ್ಷಿಣ ಕೊಡಗಿನ ‘ಕ್ಲೀನ್ ಕೂರ್ಗ್ ಇನೀಷಿಯೇಟಿವ್’ ಸಂಸ್ಥೆ ವತಿಯಿಂದ ಹಸಿ ಕಸ ನಿರ್ವಹಣೆ ಕುರಿತು ನೀಡಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಬಳಿಕ ನಗರಸಭಾ ಆಡಳಿತ ಮಂಡಳಿಯೊAದಿಗೆ ಮಾತನಾಡಿದ ಅವರು, ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ನಗರದ ಅಂಚಿನ ಸ್ಟೀವರ್ಟ್ ಹಿಲ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಅಸಮರ್ಪಕ ತ್ಯಾಜ್ಯ ನಿರ್ವಹಣೆಯ ರೀತಿಯಲ್ಲಿ ಕಸ ವಿಲೇವಾರಿ ನಡೆಯಬಾರದು. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ತ್ಯಾಜ್ಯ ನಿರ್ವಹಣೆಯನ್ನು ಕೋರಮಂಗಲದಲ್ಲಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ. ನಗರಸಭಾ ಆಡಳಿತ ಮಂಡಳಿ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿ, ಅಲ್ಲಿನ ಉತ್ತಮ ಅಂಶಗಳನ್ನು ಮಡಿಕೇರಿಯಲ್ಲೂ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂತರ್ ಗೌಡ ಸಲಹೆ ನೀಡಿದರು.
ದಕ್ಷಿಣ ಕೊಡಗಿನ ‘ಕ್ಲೀನ್ ಕೂರ್ಗ್ ಇನೀಷಿಯೇಟಿವ್’ ಸಂಸ್ಥೆಯ ಪದಾಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಆಯಾ ಪ್ರದೇಶಗಳಲ್ಲೇ ವಿಲೇವಾರಿ ಮಾಡುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ನಗರದ ಪ್ರತಿಯೊಂದು ವಾರ್ಡ್ನಲ್ಲಿ ಹಸಿ ಕಸ ವಿಲೇವಾರಿಗೆ ಸಣ್ಣ ಜಾಗ ಒದಗಿಸಿದರೆ ಸಾಕಾಗುತ್ತದೆ. ಇಲ್ಲವೇ ಎರಡು-ಮೂರು ವಾರ್ಡ್ಗಳಿಗೆ ಒಂದು ಸಣ್ಣ ಜಾಗವನ್ನು ತ್ಯಾಜ್ಯ ನಿರ್ವಹಣೆಗೆ ಒದಗಿಸಿದರೂ ಹಸಿ ಕಸವನ್ನು ವೈಜ್ಞಾನಿಕ ಮಾದರಿಯಲ್ಲಿ ವಿಲೇವಾರಿ ಮಾಡಲು ಸಾಧ್ಯ ಎಂದು ಮಾಹಿತಿ ನೀಡಿದರು.
ಹೊರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಸ ವಿಲೇವಾರಿ ವ್ಯವಸ್ಥೆ ಹಾಗೂ ಸಂಸ್ಥೆಯ ಪ್ರಾತ್ಯಕ್ಷಿಕೆಯ ವಿವರಗಳನ್ನು ಗಮನಿಸಿ, ಮತ್ತೆ ಸಭೆ ಸೇರಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಶಾಸಕ ಮಂತರ್ ಗೌಡ ನಗರಸಭಾ ಆಡಳಿತ ಮಂಡಳಿಗೆ ಸೂಚಿಸಿದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ರಮೇಶ್, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.








