
ಮಡಿಕೇರಿ, ಆ.29 NEWS DESK : ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ತೀವ್ರಗೊಳಿಸಿದ ಐಇಸಿ ಅಭಿಯಾನದ ಅಂಗವಾಗಿ ಮ್ಯಾರಥಾನ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವು ಶನಿವಾರ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಾ ಚಕ್ರವರ್ತಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ಮಾತನಾಡಿ, ಮ್ಯಾರಥಾನ್‌ನಂತಹ ಕ್ರೀಡಾ ಚಟುವಟಿಕೆಗಳ ಮೂಲಕ ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಸೋಂಕು ಹರಡುವುದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಎಚ್‌ಐವಿ/ಏಡ್ಸ್ ಸಂಬಂಧಿತ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ನೀಡುವುದು ತೀವ್ರಗೊಳಿಸಿದ ಐಇಸಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ತರಬೇತುದಾರ ಆಂಟನಿ ಡಿಸೋಜಾ ಮಾತನಾಡಿ, ಯುವಜನರಲ್ಲಿ ಎಚ್‌ಐವಿ ತಡೆಗಟ್ಟುವಿಕೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಯುವಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, ಎಚ್‌ಐವಿ/ಏಡ್ಸ್ ಕುರಿತು ಸರಿಯಾದ ಮಾಹಿತಿ ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮಹತ್ವವನ್ನು ತಿಳಿಸಿದ ಅವರು, ಭಾರತೀಯ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಕ್ರೀಡಾ ಸಾಧನೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುನಿಲ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಧನಂಜಯ ಹಾಗೂ ಉತ್ತಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಆಂಟನಿ ಡಿಸೋಜಾ, ಬಿಂದಿಯಾ, ಮಹಾಬಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ರಮೇಶ್ ಹಾಗೂ ಅಂತರರಾಷ್ಟ್ರೀಯ ಹಿರಿಯ ಬ್ಯಾಡ್ಮಿಂಟನ್ ಕ್ರೀಡಾಪಟು ಜ್ಯೋತಿ ಸೋಮಯ್ಯ ಉಪಸ್ಥಿತರಿದ್ದರು. ಅಲ್ಲದೆ, ಜಿಲ್ಲಾ ಮೇಲ್ವಿಚಾರಕಿ ಸುನೀತಾ ಮುತ್ತಣ್ಣ, ಮಲ್ಲೇಶ್, ಅರುಣ್, ಕೌನ್ಸೆಲರ್ ಉಷಾ, ಡಿಎಪಿಸಿಯು ಕಮಲ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. :: ಮ್ಯಾರಥಾನ್ ಸ್ಪರ್ಧೆಯ ವಿಜೇತರು :: ಬಾಲಕರ ವಿಭಾಗ :: ಪ್ರಥಮ: ಪ್ರಸನ್ನ ಎಚ್.ಜಿ. – ಕಾವೇರಿ ಕಾಲೇಜು, ವಿರಾಜಪೇಟೆ, ದ್ವಿತೀಯ: ದರ್ಶನ್ – ಕಾವೇರಿ ಕಾಲೇಜು, ವಿರಾಜಪೇಟೆ, ತೃತೀಯ: ಸುಮನ್ ಬೆಳ್ಳಿಯಪ್ಪ – ಸರ್ಕಾರಿ ಪಾಲಿಟೆಕ್ನಿಕ್, ಕುಶಾಲನಗರ : : ಬಾಲಕಿಯರ ವಿಭಾಗ :: ಪ್ರಥಮ: ದೀಪಾ ಕೆ.ಎಸ್. – ಕಾವೇರಿ ಕಾಲೇಜು, ಗೋಣಿಕೊಪ್ಪ, ದ್ವಿತೀಯ: ರಶ್ಮಿತಾ ಎ.ಆರ್. – ಸರ್ಕಾರಿ ಮಹಿಳಾ ಕಾಲೇಜು, ಮಡಿಕೇರಿ ತೃತೀಯ: ಚಶಿಮಿತಾ – ಕಾವೇರಿ ಕಾಲೇಜು, ವಿರಾಜಪೇಟೆ ಮ್ಯಾರಥಾನ್ ಸಂದರ್ಭದಲ್ಲಿ ಯುವಜನರಿಗೆ ಎಚ್‌ಐವಿ/ಏಡ್ಸ್ ತಡೆಗಟ್ಟುವಿಕೆ, ಸುರಕ್ಷಿತ ಜೀವನಶೈಲಿ ಹಾಗೂ ಆರೋಗ್ಯದ ಕುರಿತು ಅರಿವು ಮೂಡಿಸಲಾಯಿತು. ಕ್ರೀಡೆಯ ಮೂಲಕ ಆರೋಗ್ಯ ಮತ್ತು ಎಚ್‌ಐವಿ/ಏಡ್ಸ್ ಜಾಗೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.










