
ಮಡಿಕೇರಿ ಆ.29 NEWS DESK : ಜಿಲ್ಲೆಯಲ್ಲಿ ಇನ್ಫ್ಲುಯೆಂಜಾ (ಎಚ್1ಎನ್1) ವೈರಸ್ ನಿಂದ ಹರಡುವ ಜ್ವರ ತಡೆಯಲು ಆರೋಗ್ಯ ಇಲಾಖೆಯು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಅಗತ್ಯ ಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಇತ್ತೀಚೆಗೆ ರಾಜ್ಯ ಆರೋಗ್ಯ ಸಚಿವರು ನಡೆಸಿದ ವಿಡಿಯೊ ಕಾನ್ಫರೆನ್ಸ್ ನಿರ್ದೇಶನದಂತೆ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರೋಗ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗಿದೆ. ರಾಜ್ಯದಲ್ಲಿ ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ತೀವ್ರ ಸ್ವರೂಪದ ಜ್ವರ ಕೆಮ್ಮು, ಶೀತ, ಹಳದಿ ಕಫ, ಗಂಟಲು ಕೆರೆತ ಹಾಗೂ ಅತಿಯಾದ ಮೈ ಕೈ ನೋವು, ಉಸಿರಾಟದ ತೊಂದರೆ ಮತ್ತು ಕೋವಿಡ್-19 ಮಾದರಿಯ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಸುಮಾರು 3762 ಸಾಮಾನ್ಯ ಶೀತ, ಕೆಮ್ಮು ಹಾಗೂ ಜ್ವರದ ಪ್ರಕರಣ ದಾಖಲಾಗಿವೆ. ತೀವ್ರ ಉಸಿರಾಟದ ಸಮಸ್ಯೆಯ 11 ಪ್ರಕರಣ ಪತ್ತೆಯಾಗಿದ್ದು ಇವುಗಳಲ್ಲಿ 4 ಮಂದಿಗೆ ಎಚ್1ಎನ್1 ಇನ್ಫ್ಲುಯೆಂಜಾ ರೋಗವು ಜಿಲ್ಲಾ ಆಸ್ವತ್ರೆ ಮಡಿಕೇರಿಯಲ್ಲಿ ಪರೀಕ್ಷೆ ಮಾಡಿ ಧೃಡಪಡಿಸಲಾಗಿದೆ, :: ಆಸ್ಪತ್ರೆಗಳಲ್ಲಿ ಸಿದ್ಧತೆ: : ಜಿಲ್ಲಾಸ್ಪತ್ರೆ ಹಾಗೂ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶಂಕಿತ ರೋಗಿಗಳಿಗೆ ಪ್ರತ್ಯೇಕ ವೈರಲ್ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್, ವೆಂಟಿಲೇಟರ್ ಹಾಗೂ ಜ್ವರ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸತ್ರೆಯಲ್ಲಿ ಪ್ರತ್ಯೇಕ ‘ಫೀವರ್ಕ್ಲಿನಿಕ್’ ತೆರೆಯಲಾಗಿದೆ. ಪ್ಯಾರಸಿಟಮಲ್, ಸಿಟ್ರಿಜಿನ್, ಆಂಟಿಪೈರೆಟಿಕ್ಸ್ ಹಾಗೂ ಐವಿ ಫೂಯಿಡ್ಸ್ ಸೇರಿದಂತೆ ಅಗತ್ಯ ಔಷಧಿಗಳ ಸಮರ್ಪಕ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗಂಭೀರ ಪ್ರಕರಣಗಳಿಗೆ ನೀಡಲಾಗುವ ‘ಒಸೆಲ್ಟಾಮಿವಿರ್’ಆಂಟಿವೈರಲ್ ಔಷಧವನ್ನು ಎಲ್ಲಾ ಕೇಂದ್ರಗಳಿಗೆ ಪೂರೈಸಲಾಗಿದ್ದು ವೆಂಟಿಲೇಟರ್ ಅಥವಾ ತೀವ್ರ ಅಗತ್ಯವಿರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಮಕ್ಕಳಲ್ಲಿ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ರೋಗಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಆತಂಕಪಡದೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು. ಇನ್ಫ್ಲುಯೆಂಜಾ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. :: ಜ್ವರ ಬಂದರೆ ಜನರಿಂದ ದೂರವಿರಿ: : ಇದು ಡ್ರಾಪ್ಲೆಟ್ಸ್ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಸಾಮಾನ್ಯ ವೈರಲ್ ಜ್ವರವಾಗಿದ್ದು ಸಾರ್ವಜನಿಕರು ಭಯಭೀತರಾಗದೆ ಮುನ್ನೆಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಸಣ್ಣ ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು. ರೋಗ ಲಕ್ಷಣಗಳಿರುವ ವ್ಯಕ್ತಿಗಳು ಜನದಟ್ಟಣೆ ಪ್ರದೇಶಗಳಿಗೆ ತೆರಳದೆ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಎಳನೀರು, ಗಂಜಿ, ನೀರು ಹೆಚ್ಚಾಗಿ ಸೇವಿಸಬೇಕು ಹಾಗೂ ಸೋಪಿನಿಂದ ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು :: ಏನು ಮಾಡಬೇಕು? :: ಸೀನುವಾಗ ಮತ್ತು ಕೆಮ್ಮುವಾಗ ಮೂಗು-ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು. ರೋಗ ಲಕ್ಷಣಗಳಿರುವ ವ್ಯಕ್ತಿಗಳು ಪ್ರತ್ಯೇಕವಾಗಿ ಇರಬೇಕು. ಜನಸಂದಣಿ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. :: ಏನು ಮಾಡಬಾರದು? :: ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಪದೇಪದೇ ಮುಟ್ಟಬಾರದು. ವೈದ್ಯರ ಸಲಹೆ ಇಲ್ಲದೆ ಸ್ವಯಂ ಔಷಧೋಪಚಾರ ಮಾಡಿಕೊಳ್ಳಬಾರದು. ರೋಗಲಕ್ಷಣಗಳಿದ್ದಾಗ ಜನಸಂದಣಿ ಸ್ಥಳಗಳಿಗೆ ಹೋಗುವುದು, ಕೈ ಕುಲುಕುವುದನ್ನು ತಪ್ಪಿಸಬೇಕು. ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹಿರಿಯ ನಾಗರಿಕರು ಮತ್ತು ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ರೋಗಲಕ್ಷಣ ಇರುವವರಿಂದ ದೂರವಿರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.








