
ಮಡಿಕೇರಿ ಆ.30 : ಶ್ರುತಿ ಲಯ ತಂಡ ಹಾಗೂ ಮಡಿಕೇರಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಇವರ ಸಹಯೋಗದಲ್ಲಿ ವಿಶ್ವ ಸಂಗೀತ ದಿನ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಮಹೋತ್ಸವದ ಪ್ರಯುಕ್ತ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಾಸರ ಕೀರ್ತನೆ ಗಾಯನ ಕಾರ್ಯಕ್ರಮದಲ್ಲಿ ಮಡಿಕೇರಿಯ ಪ್ರಜ್ಞಾ ಕಲಾ ಕೇಂದ್ರದ ಪುಟಾಣಿಗಳು ಮನೋಜ್ಞ ಗೀತಗಾಯನದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರಜ್ಞಾ ಕಲಾ ಕೇಂದ್ರದ ಗುರುಗಳಾದ ಶ್ರೀಮತಿ ಜಯಲಕ್ಷ್ಮಿ ಅವರ ಮಾರ್ಗದರ್ಶನ ಹಾಗೂ ತರಬೇತಿಯಲ್ಲಿ ಮಕ್ಕಳು ವಿವಿಧ ದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು. ಮಕ್ಕಳ ಸುಮಧುರ ಗಾಯನಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಂಗೀತಾಸಕ್ತರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ಸಾಂಪ್ರದಾಯಿಕ ದಾಸ ಸಾಹಿತ್ಯ ಹಾಗೂ ಭಕ್ತಿ ಸಂಗೀತವನ್ನು ಪುಟಾಣಿಗಳ ಮೂಲಕ ಪರಿಚಯಿಸುವ ಮೂಲಕ ಕಾರ್ಯಕ್ರಮವು ವಿಶೇಷ ಮೆರುಗು ಪಡೆದುಕೊಂಡಿತು. ಮಕ್ಕಳ ಗಾಯನ ಪ್ರತಿಭೆಯನ್ನು ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ, ಪ್ರಜ್ಞಾ ಕಲಾ ಕೇಂದ್ರದ ಗುರುಗಳಾದ ಜಯಲಕ್ಷ್ಮಿ ಅವರ ತರಬೇತಿಯನ್ನು ಅಭಿನಂದಿಸಿದರು.









