ಸೋಮವಾರಪೇಟೆ, NEWS DESK ಆ.30: ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಒಕ್ಕಲಿಗರ 10ನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಸೆ.6ರಂದು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ದೇವರಾಜು ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆಯ ಕ್ರೀಡಾಕೂಟ ಉಸ್ತುವಾರಿ ದಿವಾಕರ್ ಕೂತಿ ಹೇಳಿದರು.
ಸೆ.6ರಂದು ದಿನವಿಡೀ ಕ್ರೀಡಾಕೂಟ ನಡೆಯಲಿದೆ. ಪ್ರತಿವರ್ಷವೂ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುತ್ತಿರುವ ವೇದಿಕೆ, ಈ ಬಾರಿ ದಶಮಾನೋತ್ಸವದ ಸಂಭ್ರಮದಲ್ಲಿ ಕ್ರೀಡಾಕೂಟವನ್ನು ಮತ್ತಷ್ಟು ವಿಶೇಷವಾಗಿ ಆಯೋಜಿಸುತ್ತಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡೆಗಳು ಇತ್ತೀಚಿನ ವರ್ಷಗಳಲ್ಲಿ ಮರೆಯಾಗುತ್ತಿವೆ. ಇಂತಹ ಕ್ರೀಡೆಗಳನ್ನು ಉಳಿಸುವುದರೊಂದಿಗೆ ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಹಾಗೂ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಯುವಕರು ಭತ್ತ ಕೃಷಿಯತ್ತ ಚಿತ್ತ ಹರಿಸಬೇಕು ಎಂಬ ಸಂದೇಶವನ್ನೂ ಕ್ರೀಡಾಕೂಟದ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪುರುಷರ ವಿಭಾಗದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಕೆಸರುಗದ್ದೆ ಓಟ, ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ಕೆಸರುಗದ್ದೆ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ದಂಪತಿಗಳ ಓಟ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಓಟದ ಸ್ಪರ್ಧೆಗಳನ್ನೂ ನಡೆಸಲಾಗುತ್ತಿದೆ. ಹೀಗಾಗಿ ಕ್ರೀಡಾಕೂಟವು ಗ್ರಾಮೀಣ ಕ್ರೀಡಾ ಹಬ್ಬವಾಗಿ ರೂಪುಗೊಳ್ಳಲಿದೆ. ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ಶಾಸಕ ಡಾ. ಮಂತರ್ಗೌಡ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಬೆಂಗಳೂರು ಪ್ರತಿನಿಧಿ ಉಮಾಪತಿಗೌಡ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸೆ.5ರ ಸಂಜೆ 4 ಗಂಟೆಯೊಳಗೆ ತಂಡಗಳು ಹಾಗೂ ಸ್ಪರ್ಧಿಗಳು ಮೊಬೈಲ್ ಸಂಖ್ಯೆ 9448433294 ಮತ್ತು 8861991372ಕ್ಕೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಚೌಡ್ಲು ಯೋಗೇಂದ್ರ ಹಾಗೂ ಪದಾಧಿಕಾರಿಗಳಾದ ಪ್ರಸಿ ಗೌಡಳ್ಳಿ, ಕಿಶನ್ ಚಂಗಪ್ಪ ಮತ್ತು ಕೆ.ಎ. ಪ್ರಕಾಶ್ ಉಪಸ್ಥಿತರಿದ್ದರು.
31ಎಸ್ಪಿಟಿ1: ದಿವಾಕರ್ ಕೂತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.







