
ವಿರಾಜಪೇಟೆ, ಆ.31 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿರಾಜಪೇಟೆ ತಾಲೂಕಿನ ಮೂರ್ನಾಡು ವಲಯ, ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮರಗೋಡು ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ, ಗಾಲಿಕುರ್ಚಿ ಹಾಗೂ ವಾಟರ್ ಬೆಡ್ ವಿತರಣೆ ಮತ್ತು ಸಭಾ ಕಾರ್ಯಕ್ರಮವು ಮರಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಗೀತಾ ಕೆ.ಸಿ. ವಹಿಸಿದ್ದರು. ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗಿರ ಎನ್. ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮರಗೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಿತ್ರ ಬಿ.ಪಿ. ಮಾತನಾಡಿ, ಜನಮಂಗಲ ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಗೆ ವೀಲ್ಚೇರ್ ಹಾಗೂ ವಾಟರ್ ಬೆಡ್ ವಿತರಿಸಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ನಡೆಯಬೇಕಾದ ಇಂತಹ ಸಮಾಜಸೇವಾ ಕಾರ್ಯಗಳನ್ನು ಗ್ರಾಮಾಭಿವೃದ್ಧಿ ಯೋಜನೆ ಪರಿಣಾಮಕಾರಿಯಾಗಿ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್ ಮಾತನಾಡಿ, ಸಾಮೂಹಿಕ ಆಚರಣೆಗಳ ಮಹತ್ವ, ಸುಜ್ಞಾನ ನಿಧಿ ವಿದ್ಯಾರ್ಥಿವೇತನ, ಬ್ಯಾಂಕ್ ಬಿ.ಸಿ. ಸೇವೆ ಹಾಗೂ ಸಂಸ್ಥೆಯ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಮಾಜಿ ಸೈನಿಕ ವಿ.ಎಂ. ಸುಬ್ರಮಣಿ ಮತ್ತು ಅತಿಥಿ ನಂದಕುಮಾರ್ ಪಿ.ಟಿ. ಅವರು ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಗೋಡು ಸೇವಾ ಪ್ರತಿನಿಧಿ ಲತಾ ಸಾಧನಾ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷೆ ಮಮತಾ ಬಿ.ಎಂ., ವಲಯ ಮೇಲ್ವಿಚಾರಕ ಸುಜೀರ್ ಕುಲಾಲ್, ಪೂಜಾ ಸಮಿತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಮೂರ್ನಾಡು ವಲಯದ ಸೇವಾ ಪ್ರತಿನಿಧಿಗಳು ಹಾಗೂ ಮರಗೋಡು ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.










