
ವಿರಾಜಪೇಟೆ ಸೆ.8 NEWS DESK : ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ 18ನೇ ವರ್ಷದ ಓಣಂ ಆಚರಣೆಯು ಮೀನುಪೇಟೆಯ ಶ್ರೀ ಮುತ್ತಪ್ಪ ಕಲಾಮಂಟಪದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಸಾಂಸ್ಕೃತಿಕ ವೈವಿಧ್ಯದೊಂದಿಗೆ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಾಬಲಿ ನೃತ್ಯರೂಪಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಬಳಿಕ ಮುತ್ತಪ್ಪ ದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯಘೋಷಗಳೊಂದಿಗೆ ವೈಭವದ ಮಾವೇಲಿ ಮೆರವಣಿಗೆ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಸಾಂಪ್ರದಾಯಿಕ ಓಣಂ ಸದ್ಯವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಓಣಂ ಆಚರಣೆಯು ವಿಶ್ವಾದ್ಯಂತ ಪ್ರಖ್ಯಾತಿ ಪಡೆದ ಹಬ್ಬವಾಗಿದೆ. ಕೇರಳದ ವಿಭಿನ್ನ ಸಂಸ್ಕೃತಿಯ ವಿಶಿಷ್ಟ ಆಚರಣೆಯು ನಮ್ಮ ನಾಡಿನಲ್ಲಿಯೂ ಪಸರಿಸುತ್ತಿರುವುದು ದೇಶದ ಸಮೃದ್ಧ ಸಾಂಸ್ಕೃತಿಕ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಮಲಯಾಳಿ ಸಮಾಜದವರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಓಣಂ ಹಬ್ಬವು ಸಕಲ ಮನುಕುಲಕ್ಕೆ ಒಳಿತನ್ನು ಮಾಡಲಿ. ನಾಡಿನ ಎಲ್ಲರಿಗೂ ಸುಖ, ಸಮೃದ್ಧಿ ಹಾಗೂ ಸುಭಿಕ್ಷೆ ದೊರೆಯಲಿ ಎಂದು ಹಾರೈಸಿದರು. ಸಮಾಜದ ಅಧ್ಯಕ್ಷರು ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದು, ಅವುಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ, ಸಮಾಜದ ನಿರಂತರ ಸೇವಾ ಕಾರ್ಯಗಳು, ಕಳೆದ ವರ್ಷದ ಸಾಧನೆಗಳು ಹಾಗೂ ಪ್ರಮುಖ ಬೇಡಿಕೆಗಳ ಕುರಿತು ವಿವರಿಸಿದರು. ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸುವ ಸಂದರ್ಭದಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಮೃತರ ಕುಟುಂಬಸ್ಥರು ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ದಹನ ಸ್ಥಳಕ್ಕೆ ಮೇಲ್ಚಾವಣಿ ನಿರ್ಮಿಸುವಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲಾಗಿತ್ತು ಎಂದರು. ಈ ಹಿಂದೆ ವಿಧಾನ ಪರಿಷತ್ ಸದಸ್ಯೆ ಸುಜಾ ಕುಶಾಲಪ್ಪ ಅವರು ರೂ.5 ಲಕ್ಷ ನೀಡುವುದಾಗಿ ತಿಳಿಸಿದ್ದರು. ಅದೇ ವೇಳೆ, ಅವರು ರೂ.5 ಲಕ್ಷ ನೀಡಿದರೆ ತಾವು ಅದಕ್ಕಿಂತ ಒಂದು ರೂಪಾಯಿಯೂ ಕಡಿಮೆ ಇಲ್ಲದೆ ಅನುದಾನ ನೀಡುವುದಾಗಿ ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದ್ದರು. ಆದರೆ, ಆ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ಇದೀಗ ಶಾಸಕ ಪೊನ್ನಣ್ಣ ಅವರು ತಮ್ಮ ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನ ಮಂಜೂರು ಮಾಡಿ ಕಾಮಗಾರಿ ತಕ್ಷಣ ಆರಂಭಿಸಲು ಸೂಚಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು. ಕಳೆದ 18 ವರ್ಷಗಳಿಂದ ಮುತ್ತಪ್ಪ ಮಲಯಾಳಿ ಸಮಾಜವು ಶಾಸಕರು, ಸಂಸದರು, ಎಂಎಲ್ಸಿ ಅಥವಾ ಪುರಸಭೆ ಸದಸ್ಯರಿಂದ ಯಾವುದೇ ಆರ್ಥಿಕ ನೆರವು ಪಡೆಯದೆ ಸ್ವಂತ ಬಲದಿಂದ ಆಚರಣೆಗಳನ್ನು ನಡೆಸುತ್ತಾ ಬಂದಿದೆ. ಜೊತೆಗೆ ಬಡ ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುತ್ತಿದೆ ಎಂದರು. ಕಳೆದ ವರ್ಷ ಮೃತರ ಕುಟುಂಬಗಳಿಗೆ ಹಾಗೂ ಚಿಕಿತ್ಸಾ ನಿಧಿಗಾಗಿ ಸದಸ್ಯರಿಗೆ ಒಟ್ಟು ರೂ.3.85 ಲಕ್ಷ ನೆರವು ನೀಡಲಾಗಿದೆ. ಇಬ್ಬರು ಮಕ್ಕಳ ಚಿಕಿತ್ಸೆಗೆ ಕ್ರಮವಾಗಿ ರೂ.2 ಲಕ್ಷ ಹಾಗೂ ರೂ.1 ಲಕ್ಷ, ಕ್ಯಾನ್ಸರ್ ರೋಗಿಯೊಬ್ಬರಿಗೆ ರೂ.2 ಲಕ್ಷ ಹಾಗೂ ಯುವಕನೊಬ್ಬನಿಗೆ ಕೃತಕ ಕಾಲು ಅಳವಡಿಸಲು ಆರ್ಥಿಕ ನೆರವು ನೀಡಲಾಗಿದೆ ಎಂದು ವಿವರಿಸಿದರು. ಸಮಾಜದ ಕೆಲ ಸದಸ್ಯರು ಸ್ವತಃ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರೂ ತಮ್ಮ ಆದಾಯದಿಂದ ರೂ.500ರಿಂದ ರೂ.1,000ವರೆಗೆ ನೀಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಸಮಾಜದ ವತಿಯಿಂದ ಸೂಕ್ತ ಜಾಗ ಒದಗಿಸಿದರೆ ರೂ.1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಶಾಸಕ ಪೊನ್ನಣ್ಣ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ಸಮಾಜದಲ್ಲಿ ಸುಮಾರು 300 ಕುಟುಂಬಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿವೆ. ಕಳೆದ 15 ವರ್ಷಗಳಿಂದ ಸಿ.ಆರ್. ಬಾಬು ಅವರು ಪ್ರಧಾನ ಕಾರ್ಯದರ್ಶಿಯಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆ ಶ್ಲಾಘನೀಯವಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ಮಾತನಾಡಿ, ತಾವು ಪೊನ್ನು ಮುತ್ತಪ್ಪನ ಪರಮ ಭಕ್ತರಾಗಿದ್ದು, ಪ್ರತಿದಿನ ಬೆಳಿಗ್ಗೆ ಮುತ್ತಪ್ಪನ ಹೆಸರನ್ನು ಸ್ಮರಿಸುವುದರಿಂದ ಆಯುಷ್ಯ ಹಾಗೂ ಶಕ್ತಿ ದೊರೆಯುತ್ತದೆ ಎಂದರು. ಸಮಾಜದಲ್ಲಿ ‘ವಿಭಜಿಸಿ ಆಳುವ’ ಮನಸ್ಥಿತಿ ಅಥವಾ ದ್ವಂದ್ವ ನೀತಿ ಇರಬಾರದು. ಪ್ರತಿಯೊಬ್ಬರೂ ಹೃದಯದಿಂದ ಒಂದಾಗಿ ನಿಂತು ದೇಶ ಹಾಗೂ ಸಮಾಜದ ನೆಮ್ಮದಿಯನ್ನು ಕಾಪಾಡಬೇಕು. ಕೊಡಗಿನ ಬೆಳವಣಿಗೆಯಲ್ಲಿ ಮಲಯಾಳಿ ಸಮುದಾಯದ ಕೊಡುಗೆ ಅಪಾರವಾಗಿದೆ. ಮುತ್ತಪ್ಪ ಮಲಯಾಳಿ ಸಮಾಜದ ಸಮಾಜಮುಖಿ ಕಾರ್ಯಗಳಿಗೆ ಕೊಡವ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಬಾಬು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಿಂದೂ ಮಲಯಾಳಿ ಸಂಘಗಳ ಐಕ್ಯತೆಗೆ ಮೂರ್ನಾಡು ತಳಹದಿಯಾಗಿದ್ದು, ಪ್ರಸ್ತುತ ಅಲ್ಲಿ 12 ಸಂಘಟನೆಗಳು ಸಕ್ರಿಯವಾಗಿವೆ. ಸಮುದಾಯದ ಏಳಿಗೆ ಹಾಗೂ ಕಲ್ಯಾಣ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಮಡಿಕೇರಿ ಮುತ್ತಪ್ಪ ದೇವಾಲಯದ ಉಪಾಧ್ಯಕ್ಷ ಸುಧೀರ್ ಮಾತನಾಡಿ, ಸಮುದಾಯದ ಜನರನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವುದೇ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದರು. ಮಕ್ಕಳು ಕೇವಲ ವಿದ್ಯಾವಂತರಾದರೆ ಸಾಲದು, ಸಂಸ್ಕಾರವಂತರಾಗುವುದೂ ಮುಖ್ಯ. ವಿದ್ಯೆಯು ಜ್ಞಾನವನ್ನು ನೀಡಿದರೆ, ಸಂಸ್ಕಾರವು ಮೌಲ್ಯಯುತ ಜೀವನವನ್ನು ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳು ಪೋಷಕರ ನಡತೆ ಮತ್ತು ಹೆಜ್ಜೆಗುರುತುಗಳನ್ನು ಅನುಸರಿಸುವುದರಿಂದ, ಮೊದಲು ಪೋಷಕರೇ ಉತ್ತಮ ಆಚಾರ-ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗೋಣಿಕೊಪ್ಪ ಕಾಪ್ಸ್ ಶಾಲೆಯ ಪ್ರಾಂಶುಪಾಲ ಡಾ. ರಾಮಚಂದ್ರ ಮಾತನಾಡಿ, ಒಳ್ಳೆಯ ಮನಸ್ಸಿನ ಪ್ರತಿಯೊಬ್ಬರಿಗೂ ಹೊಸ ಜ್ಞಾನ ಮತ್ತು ಜಾಗೃತಿಯನ್ನು ತಲುಪಿಸುವುದು ಅಗತ್ಯ. ಓಣಂ ಹಬ್ಬದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಶಯಗಳನ್ನು ಮುಂದಿನ ಪೀಳಿಗೆಗೆ ಯಥಾವತ್ತಾಗಿ ಹಸ್ತಾಂತರಿಸುವುದೇ ಇಂತಹ ಆಚರಣೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಲೇಖಕಿ ಕೃಪಾ ದೇವರಾಜ್ ಮಾತನಾಡಿ, ಕೊಡಗು ಹಾಗೂ ಮಲಯಾಳಿ ಸಮುದಾಯದ ನಡುವಿನ ಬಾಂಧವ್ಯವನ್ನು ಪ್ರಶಂಸಿಸಿ, ಓಣಂ ಆಚರಣೆಯ ಮಹತ್ವವನ್ನು ವಿವರಿಸಿದರು.
:: ಸಾಧಕರಿಗೆ ಸನ್ಮಾನ:: ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಅಭಿನವ್ ಪ್ರಭಾಕರ್, ಕುಮಾರಿ ನಂದನಾ, ಸಯೂಜ್ಯ ಪಿ., ದಿಯಾ ಕೆ., ಶ್ರೀಲಕ್ಷ್ಮಿ ಪ್ರದೀಪ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಡಾ. ಎಂ. ರಾಮಚಂದ್ರನ್, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸುಶೀಲಾ, ಕೃಷಿ ಕ್ಷೇತ್ರದ ವಿಷ್ಣು ಪಿ.ಎಸ್., ಸಂಗೀತ ಕ್ಷೇತ್ರದ ಮೋಹನ್ ಟಿ.ಡಿ., ಚಲನಚಿತ್ರ, ನೃತ್ಯ ಹಾಗೂ ಅಭಿನಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಷ್ಣು ಮತ್ತು ವಿನೀಶ್, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿಂದು ಕೆ.ಆರ್. ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸುರೇಶ್ ಬಾಬು ಅವರನ್ನು ಗೌರವಿಸಲಾಯಿತು.
:: ಆಕರ್ಷಕ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ :: ಬೆಳಿಗ್ಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆಯು ನೋಡುಗರ ಗಮನ ಸೆಳೆಯಿತು. ಮಧ್ಯಾಹ್ನ ತಿರುವಾದಿರ ನೃತ್ಯದೊಂದಿಗೆ ಮಕ್ಕಳು ಹಾಗೂ ಸಮಾಜದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಾಯಿತು. ಮಧ್ಯಾಹ್ನದಿಂದ ಸಂಜೆಯವರೆಗೆ ಪ್ರತಿ ಗಂಟೆ ಉಚಿತ ಕೂಪನ್ ಡ್ರಾ ಆಯೋಜಿಸಲಾಗಿತ್ತು. ಸಂಜೆ ಓಣಂ ಸಹಾಯಾರ್ಥ ಕೂಪನ್ ಡ್ರಾ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಲಯಾಳಿ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಮಾತೆಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










