ವಿರಾಜಪೇಟೆ, NEWS DESK ಸೆ.12: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ 44ನೇ ವರ್ಷದ ಅದ್ದೂರಿ ಗಣೇಶೋತ್ಸವ ಸಮಾರಂಭ ನಡೆಯಲಿದೆ.
ಸೆಪ್ಟೆಂಬರ್ 14ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ವಿಶೇಷ ಪೂಜೆ ಹಾಗೂ ಅನ್ನದಾನ ಸೇವೆಗಳು ನಡೆಯಲಿವೆ. ಒಟ್ಟು ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಪ್ರತಿದಿನ ಮಧ್ಯಾಹ್ನ ಹಾಗೂ ಸಂಜೆ ವಿಶೇಷ ಪೂಜೆ ಮತ್ತು ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಏರ್ಪಡಿಸಲಾಗಿದೆ.
ಸೆಪ್ಟೆಂಬರ್ 20ರಂದು ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ. ಹೂವಿನಿಂದ ಅಲಂಕರಿಸಲಾದ ಮಂಟಪದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಚಂಡೆ ಸೇವೆ, ಭಜನೆ, ಕುಣಿತ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳೊಂದಿಗೆ ಮೆರವಣಿಗೆ ನಡೆಸಲಾಗುವುದು.
ಏಳು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.








