ವಿರಾಜಪೇಟೆ, NEWS DESK ಅ.30: ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜನರಲ್ ವಿಕ್ರಮ್ ತನೇಜ ಹಾಗೂ ಡಾ. ಪೊನ್ನಕಚ್ಚಿರ ವಿದ್ಯಾ ಪೂಣಚ್ಚ ದಂಪತಿಗಳು ಶಾಲೆಗೆ ಐದು ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನರಲ್ ವಿಕ್ರಮ್ ತನೇಜ ಅವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಬೆಳೆಸಿಕೊಳ್ಳಲು ಈ ಕೊಡುಗೆ ಸಹಕಾರಿಯಾಗಲಿದೆ ಎಂಬ ಆಶಯದಿಂದ ಕಂಪ್ಯೂಟರ್ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ತಮ್ಮ ಪತ್ನಿ ಡಾ. ವಿದ್ಯಾ ಪೂಣಚ್ಚ ಅವರು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಶಾಲೆಯ ಅಡುಗೆ ಕೊಠಡಿ ಹಾಗೂ ಶೌಚಾಲಯವನ್ನು ಜೀರ್ಣೋದ್ಧಾರ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ಕೆಂಜಂಗಡ ಗಣಪತಿ, ಸಿಆರ್ಪಿ ಸೈಪುನ್ನಿಸಾ, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೆರಳಿ ನಾಡು ಅಧ್ಯಕ್ಷ ಸಂದೇಶ್ ತಿಮ್ಮಯ್ಯ, ನಿರ್ದೇಶಕ ದೀಪು ದೇವಯ್ಯ, ಮುಖ್ಯ ಶಿಕ್ಷಕ ದೇವರಾಜ್ ಬಿ.ಟಿ., ಅತಿಥಿ ಶಿಕ್ಷಕಿಯರಾದ ಶರಣ್ಯ ಟಿ.ಎಸ್., ಸುಮಾ ಜಿ.ಎಸ್., ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















