ಗೋಣಿಕೊಪ್ಪ, NEWS DESK ಸೆ.12: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನವೆಂಬರ್ 2 ಮತ್ತು 3ರಂದು ಮಡಿಕೇರಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಯ ಲಾಂಛನವನ್ನು ರಿಪಬ್ಲಿಕ್ ನೆಟ್‌ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಬಿಡುಗಡೆಗೊಳಿಸಿದರು.
ಪೊನ್ನಂಪೇಟೆಯ ಖಾಸಗಿ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕೊಡಗಿನ ಪತ್ರಕರ್ತರು ಸಾಕಷ್ಟು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಸಂಘಟಿತರಾಗುತ್ತಿರುವುದು ಮೆಚ್ಚುವ ವಿಚಾರವಾಗಿದೆ. ಹಿಂದೆಯೂ ಹಲವು ಕ್ರೀಡಾಕೂಟಗಳು ನಡೆದಿರುವ ಬಗ್ಗೆ ಮಾಹಿತಿ ಇದೆ. ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸುವ ಮೂಲಕ ಮತ್ತೆ ಕ್ರೀಡಾ ಚಟುವಟಿಕೆಗಳತ್ತ ಉತ್ಸಾಹ ತೋರುತ್ತಿರುವುದು ಮಾದರಿಯಾಗಿದೆ. ಕ್ರೀಡಾಕೂಟಕ್ಕೆ ಅಗತ್ಯ ನೆರವು ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳ ತಂಡಗಳನ್ನು ಸೇರಿಸಿಕೊಂಡು ಕ್ರಿಕೆಟ್ ಟೂರ್ನಿ ನಡೆಸಲು ಯೋಜನೆ ರೂಪಿಸಲಾಗಿದೆ. ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸುಮಾರು 20ಕ್ಕೂ ಹೆಚ್ಚು ಪತ್ರಕರ್ತರನ್ನು ಒಳಗೊಂಡ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಲ್ಲರ ಸಹಕಾರ ಅಗತ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಎರಡನೇ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯ ಆತಿಥ್ಯವನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಬೇರೆ ಜಿಲ್ಲೆಗಳ ತಂಡಗಳಿಗೆ ಕೊಡಗಿನ ಬಗ್ಗೆ ಮತ್ತಷ್ಟು ತಿಳಿಯಲು ಹಾಗೂ ಪರಸ್ಪರ ಒಗ್ಗಟ್ಟಿಗೆ ಇದು ಸಹಕಾರಿಯಾಗಲಿದೆ ಎಂದರು.
ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ, ಸಂಘದ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ವಿಶ್ವ ಕುಂಬೂರು ಅವರು ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು. ಸಿಂಗಿ ಸತೀಶ್ ಸ್ವಾಗತಿಸಿದರು. ಸುಬ್ರಮಣಿ ವಂದಿಸಿದರು.







