
ಮಡಿಕೇರಿ NEWS DESK ಸೆ.18 : ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಬಳಸಲು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದು ಸ್ವಾಗತಾರ್ಹವೆಂದು ವಿಶ್ವ ತುಳುವ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಸಂದರ್ಭ ಭೇಟಿ ನೀಡಿದ್ದ ತುಳುವ ಮಹಾಸಭಾದ ಕೊಡಗು ನಿಯೋಗ ಸರಕಾರದ ನಿರ್ಧಾರವನ್ನು ಸ್ವಾಗತಿಸಿತು.
ತುಳು ಎರಡು ಸಾವಿರ ವರ್ಷಗಳಿಗೂ ಹಳೆಯದಾದ ಭಾಷೆಯಾಗಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ತುಳು ಭಾಷೆ ಮಹತ್ವದ ಬೆಳವಣಿಗೆಯನ್ನು ಹೊಂದಿದೆ. ತುಳು ಭಾಷೆಯ ಅಭಿವೃದ್ಧಿಗಾಗಿ ಇದನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕೆಂದು ವಿಶ್ವ ತುಳುವ ಮಹಾಸಭಾ ಸರಕಾರಕ್ಕೆ ಕಳೆದ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದೆ. ಈ ಕುರಿತು ತಜ್ಞರು ಹಾಗೂ ಅಧಿಕಾರಿಗಳಿಂದ ವರದಿ ಪಡೆದ ಸರಕಾರ ಅದರ ಆಧಾರದ ಮೇಲೆ ಇಂದು ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಬಳಸಲು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿರುವ ಐತಿಹಾಸಿಕ ನಿರ್ಧಾರವಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಬಿ.ಐತಪ್ಪ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ ಲೋಚನ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಎಂ.ರವಿ ತಿಳಿಸಿದರು.
ತುಳು ಭಾಷೆಯ ಅನುವಾದ, ತರಬೇತಿ ಹಾಗೂ ಆಡಳಿತದಲ್ಲಿ ಭಾಷೆಯ ಬಳಕೆಗೆ ಸಂಬoಧಿಸಿದ ವಿವಿಧ ಚಟುವಟಿಕೆಗಳಿಗೆ ಪ್ರತಿ ವರ್ಷ 82 ಲಕ್ಷ ರೂ. ಅನುದಾನ ಒದಗಿಸುವುದಾಗಿ ಘೋಷಿಸಿರುವುದು ಅತ್ಯಂತ ಹರ್ಷದಾಯಕ. ಸರಕಾರದ ಕ್ರಮದಿಂದ ತುಳು ಭಾಷೆಯ ಆಡಳಿತಾತ್ಮಕ ಬಳಕೆ, ಸಂರಕ್ಷಣೆ ಹಾಗೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಈ ಮಹತ್ವದ ನಿರ್ಧಾರವನ್ನು ಕೈಗೊಂಡ ಸರಕಾರಕ್ಕೆ ವಿಶ್ವ ತುಳುವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿದ ನಂತರ ನಡೆದ ವಿಜಯೋತ್ಸವದಲ್ಲಿ ತುಳು ಕೂಟದ ಅಧ್ಯಕ್ಷ ಬಿ.ಬಿ.ಐತ್ತಪ್ಪ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮೊಗೇರ, ವಿಶ್ವ ತುಳುವ ಮಹಾಸಭಾದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ ಲೋಚನ, ಭಂಟರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ರೈ, ತಾಲ್ಲೂಕು ಸಂಚಾಲಕ ಸದಾಶಿವ ರೈ, ಮಹಾಸಭಾದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಶಭರಿ ಶೆಟ್ಟಿ ಸೇರಿದಂತೆ ಕೊಡಗು ಜಿಲ್ಲೆಯ ಅನೇಕ ತುಳು ಭಾಷಿಕ ಸಂಘಟನೆಗಳ ಪ್ರಮುಖರು, ಸದಸ್ಯರು ಹಾಗೂ ತುಳು ಭಾಷಾ ಅಭಿಮಾನಿಗಳು ಪಾಲ್ಗೊಂಡಿದ್ದರು.









