ಸೋಮವಾರಪೇಟೆ, NEWS DESK ಸೆ. 18: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 20ರ ಭಾನುವಾರ ಪೂರ್ವಾಹ್ನ 10 ಗಂಟೆಗೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ.ಬಿ. ಸೋಮಯ್ಯ ತಿಳಿಸಿದ್ದಾರೆ.
ಸಂಘವು ಜನಸೇವೆಯಲ್ಲಿ ಸಾರ್ಥಕ 106 ವರ್ಷಗಳನ್ನು ಪೂರೈಸಿದ್ದು, ಸಂಘದ ಏಳಿಗೆಗೆ ಸಹಕರಿಸುತ್ತಿರುವ ಸರ್ವ ಸದಸ್ಯರು, ಠೇವಣಿದಾರರು ಹಾಗೂ ಗ್ರಾಹಕರು ಅಭಿನಂದನಾರ್ಹರು. ಸಂಘವು 31–03–2026ಕ್ಕೆ ರೂ. 531 ಕೋಟಿಗಳ ವ್ಯವಹಾರ ನಡೆಸಿ ಲಾಭದತ್ತ ಸಾಗಿದೆ ಎಂದು ಅವರು ತಿಳಿಸಿದರು.
ಸಂಘವು ತಾಲೂಕಿನ ಅಬ್ಬೂರುಕಟ್ಟೆ ಹಾಗೂ ಬಳಗುಂದ ಶಾಖೆಗಳನ್ನು ಹೊಂದಿದ್ದು, ಗ್ರಾಮೀಣ ಭಾಗದ ರೈತರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಸಂಘದಲ್ಲಿ ಜಾಮೀನು ಸಾಲ ವಿಮಾ ಯೋಜನೆ ಹಾಗೂ ಪಿಗ್ಮಿ ಓವರ್‌ಡ್ರಾಫ್ಟ್ ಸಾಲದ ವಿಮಾ ಯೋಜನೆ ಜಾರಿಯಲ್ಲಿದೆ. ಯಶಸ್ವಿನಿ ರೈತರ ವಿಮಾ ಯೋಜನೆಯೂ ಜಾರಿಯಲ್ಲಿದ್ದು, 2,084 ಸದಸ್ಯರು ಸದರಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದರು.
2025–26ನೇ ಸಾಲಿನಲ್ಲಿ 7ನೇ ತರಗತಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಹಾಗೂ ಸಂಘದ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ಸೋಮವಾರಪೇಟೆ ತಾಲೂಕಿನ ವಸತಿ ರಹಿತ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಕೆ.ಟಿ. ಸುಭಾಶ್, ರೂಪ ಸತೀಶ್, ಪಿ.ಕೆ. ರವಿ, ಬಿ.ಎಂ. ಸುರೇಶ್, ದೇವರಾಜ್, ಉದಯ ಕುಮಾರ್, ಕಿರಣ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ರವೀಂದ್ರ ಉಪಸ್ಥಿತರಿದ್ದರು.







