ಸುಂಟಿಕೊಪ್ಪ, NEWS DESK ಸೆ.19: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ.59,53,671 ನಿವ್ವಳ ಲಾಭ ಗಳಿಸಿದೆ.
ಶನಿವಾರ ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆರ್ಮಿ ಡಿಸೋಜ ಅವರು ಸಂಘದ ಪ್ರಗತಿಯ ಕುರಿತು ಮಾಹಿತಿ ನೀಡಿದರು. 2025-26ನೇ ಸಾಲಿನಲ್ಲಿ ಸಂಘದಲ್ಲಿ 1,999 ಮಂದಿ ಸದಸ್ಯರಿದ್ದು, ಸದಸ್ಯರ ಪಾಲು ಹಣ ರೂ.8,62,72,280 ಹಾಗೂ ಸರ್ಕಾರದ ಪಾಲು ಹಣ ರೂ.78,000 ಇದೆ ಎಂದು ತಿಳಿಸಿದರು.
ಸಂಘದ ಸಾಲ ಮರುಪಾವತಿ ಪ್ರಮಾಣ ಶೇ.98.50ರಷ್ಟಿದ್ದು, ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷರ ಮಾತಿಗೆ ಪ್ರತಿಕ್ರಿಯಿಸಿ ಮಾತನಾಡಿದ ಚಂದ್ರಶೇಖರ್ ಅವರು, ಸಂಘದ ಸದಸ್ಯರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರದ ಶಿಕ್ಷಣದಲ್ಲಿ ಪ್ರತಿಭಾ ಪುರಸ್ಕಾರದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಮೊದಲ ಮೂರು ಸ್ಥಾನ ಪಡೆಯುವವರಿಗೆ ಪ್ರತಿಭಾ ಪುರಸ್ಕಾರ ನೀಡಬೇಕು ಎಂದು ಆಗ್ರಹಿಸಿದರು. ಅವರ ಮಾತಿಗೆ ಸದಸ್ಯರಾದ ಬಿ.ಜಿ.ಜವಹರ್, ಕರುಣ ಮತ್ತಿತರರು ಧ್ವನಿಗೂಡಿಸಿದರು.
ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರ ಮಕ್ಕಳು ಸರ್ಕಾರಿ ಕಾಲೇಜುಗಳಲ್ಲಿ ಪದವಿ ವ್ಯಾಸಂಗದಲ್ಲಿ ಮೊದಲ ಎರಡು ಸ್ಥಾನ ಪಡೆಯುವವರಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು.
ಸಂಘದ ಬೆಳವಣಿಗೆ ಮತ್ತು ಲಾಭದ ದೃಷ್ಟಿಯಿಂದ ಪ್ರತಿಯೊಬ್ಬ ಸದಸ್ಯರು ಸಂಘದ ವಿವಿಧ ಶಾಖೆಗಳಲ್ಲಿ ಕನಿಷ್ಠ ರೂ.5,000 ವಹಿವಾಟು ನಡೆಸಬೇಕು ಎಂದು ಜೆರ್ಮಿ ಡಿಸೋಜ ಮನವಿ ಮಾಡಿದರು.
ಸಂಘದ ಹಿರಿಯ ಸದಸ್ಯ ಬಾಲಕೃಷ್ಣ ರೈ ಮಾತನಾಡಿ, ಕಳೆದ ಮಹಾಸಭೆಯಲ್ಲಿ ಅನೇಕ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಮಜಾಯಿಷಿ ಉತ್ತರಗಳನ್ನು ಪಡೆದಿದ್ದೇವೆ. ಆದರೆ ಅವುಗಳನ್ನು ಯಾವುದೇ ದಾಖಲಾತಿ ಪುಸ್ತಕದಲ್ಲಿ ನಮೂದಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಬಿ.ಜಿ.ಜವಹರ್ ಅವರು, ಇತರ ಬ್ಯಾಂಕುಗಳಲ್ಲಿರುವ ರೀತಿಯಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆಯದಿದ್ದರೂ, ನಾವು ರಜೆ ಕೇಳಿದ್ದೇವೆ ಎಂಬ ರೀತಿಯಲ್ಲಿ ನಿರ್ಣಯ ನಮೂದಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಲೋಪವನ್ನು ಸರಿಪಡಿಸಿಕೊಳ್ಳುವ ಬಗ್ಗೆ ಅಧ್ಯಕ್ಷರು ಸಮಜಾಯಿಷಿ ನೀಡಿದರು.
ಸಂಘದ ಹಿರಿಯ ಸದಸ್ಯ ಕೆ.ಡಿ.ರಾಮಯ್ಯ ಮಾತನಾಡಿ, ಸಂಘದ ರೂ.59 ಲಕ್ಷ ಲಾಭದಲ್ಲಿ ರೂ.28 ಲಕ್ಷ ಬಾಡಿಗೆ ರೂಪದಲ್ಲಿ ಬಂದಿದೆ. ಉಳಿದ ಲಾಭಾಂಶ ಸಾಲದು. ಸಂಘದ ಆರ್ಥಿಕ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ವಿವರಣೆ ನೀಡಿದ ಜೆರ್ಮಿ ಡಿಸೋಜ ಅವರು, ರೂ.19 ಲಕ್ಷ ಮಾತ್ರ ಬಾಡಿಗೆ ಬರುತ್ತಿದ್ದು, ರೂ.46 ಲಕ್ಷ ಆಡಳಿತಾತ್ಮಕ ವೆಚ್ಚವಾಗುತ್ತಿದೆ. ಈಗಾಗಲೇ ಕಾನ್‌ಬೈಲ್‌ನಲ್ಲಿ ರೂ.25 ಲಕ್ಷ ವ್ಯಯಿಸಿ ಗೋದಾಮು ನಿರ್ಮಿಸಲಾಗಿದೆ. ಸಂಘದ ಆರು ಶಾಖೆಗಳ ಮುಖಾಂತರ ವಾರ್ಷಿಕ ರೂ.15 ಲಕ್ಷ ಲಾಭ ಗಳಿಸಲಾಗುತ್ತಿದೆ ಎಂದು ತಿಳಿಸಿದರು.
ನಿರಖು ಠೇವಣಿಗಳ ಬಡ್ಡಿ ದರ ಕಡಿಮೆಯಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ನಿರಖು ಠೇವಣಿಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದರು. ಈಗಾಗಲೇ ಸಂಘದ ಕಲ್ಲೂರು ಶಾಖೆಯನ್ನು ನವೀಕರಣಗೊಳಿಸಿ ಗೋದಾಮು ಮತ್ತು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಾನ್‌ಬೈಲ್ ಶಾಖೆಯನ್ನು ಕೂಡ ನವೀಕರಣಗೊಳಿಸಿ ಗೋದಾಮು ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲಾಗುವುದು ಎಂದರು.
ವಾರ್ಷಿಕ ಮಹಾಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎ.ಎಸ್.ಶ್ರೀಶಾ, ದೇಚಮ್ಮ ಮತ್ತು ಸೌಮ್ಯ ಎಸ್.ಜೆ. ಅವರು ಮೊದಲ ಮೂರು ಬಹುಮಾನಗಳನ್ನು ಪಡೆದರು.
ಪಿಯುಸಿ ವಿಭಾಗದಲ್ಲಿ ಕಲಾ ವಿಭಾಗದಲ್ಲಿ ರಕ್ಷಿತ ಮತ್ತು ಪಲ್ಲವಿ, ವಾಣಿಜ್ಯ ವಿಭಾಗದಲ್ಲಿ ಅಪ್ರೀನ್ ಮತ್ತು ಯಶವಂತ್ ಕೆ.ಎನ್., ವಿಜ್ಞಾನ ವಿಭಾಗದಲ್ಲಿ ದೀಪಕ್ ಕೆ.ಆರ್. ಮತ್ತು ಶಿಫಾ ಬಹುಮಾನಗಳನ್ನು ಪಡೆದರು.
ಸಭೆಯ ಆರಂಭದಲ್ಲಿ 2025-26ನೇ ಸಾಲಿನಲ್ಲಿ ಮೃತಪಟ್ಟ ಸದಸ್ಯರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ವಿಶೇಷವಾಗಿ ಸಹಕಾರ ರತ್ನ ಎಂ.ಎನ್.ಕೊಮರಪ್ಪ ಅವರ ನಾಲ್ಕು ದಶಕಗಳ ಸಹಕಾರಿ ಸೇವೆಯನ್ನು ಸಂಘದ ಮಾಜಿ ಅಧ್ಯಕ್ಷ ಎನ್.ಸಿ.ಕ್ಲೆವ್ ಪೊನ್ನಪ್ಪ ಸ್ಮರಿಸಿ ಮಾತನಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಪಿ.ಪಿ.ಉದಯಕುಮಾರ್, ನಿರ್ದೇಶಕರಾದ ಎನ್.ಸಿ.ಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಕೆ.ಎಸ್.ಮಂಜುನಾಥ್, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಕೆ.ಆರ್.ಮಂಜುನಾಥ್, ಡಿ.ಎಚ್.ಚಂದ್ರಶೇಖರ್, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ, ಕೆ.ವಿ.ರಮ್ಯ ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೊದಲಿಗೆ ಅಕ್ಷತಾ ಯೋಗೇಶ್ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಸ್ವಾಗತಿಸಿದರು. ನಿರ್ದೇಶಕ ಡಾ.ಶಶಿಕಾಂತ ರೈ ನಿರೂಪಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ವಂದಿಸಿದರು.







