ವಿರಾಜಪೇಟೆ, NEWS DESK ಸೆ.19: ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲಿನ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾಲ್ಚೆಂಡು ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ವಿಭಾಗ, ಜಿಲ್ಲಾ ವಿದ್ಯಾರ್ಥಿ ಕ್ರೀಡಾನಿಧಿ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟ ಅನುಷ್ಠಾನ ಸಮಿತಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಾಲಾ ಕ್ರೀಡಾ ಸ್ಪರ್ಧೆಗಳು ನಡೆದವು.
ಕ್ರೀಡಾಕೂಟದಲ್ಲಿ 14 ಹಾಗೂ 17 ವಯೋಮಿತಿ ವಿಭಾಗದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲಿನ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕ ಸಂತೋಷ್ ಅವರು ತರಬೇತಿ ನೀಡಿದ್ದರು. ಶಾಲೆಯ ಪ್ರಾಂಶುಪಾಲರಾದ ರೆ. ಫಾ. ಜೋಶಿ ಜೋನ್ ಮನಾಲೆಲ್, ವ್ಯವಸ್ಥಾಪಕರಾದ ಥಾಮಸ್ ಆಯಂಗುಡಿ ಹಾಗೂ ಆಡಳಿತಾಧಿಕಾರಿ ಜೋಸೆಫ್ ಅಚ್ಚಂಡಿ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ಜಿಲ್ಲೆಯ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ, ವಿಭಾಗ ಮಟ್ಟದ ಪಂದ್ಯಾವಳಿಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.








