ಮಡಿಕೇರಿ, NEWS DESK ಸೆ.23: ಅಸಹಾಯಕರು, ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರ ಧ್ವನಿಯಾಗಿ ಕಳೆದ 35 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕ ವಿ.ಪಿ.ಶಶಿಧರ್ ಅವರಿಗೆ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದ ವತಿಯಿಂದ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಹಾಗೂ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳಿಂದ ಕುಶಾಲನಗರ ವ್ಯಾಪ್ತಿಯ ಜನರ ಪ್ರಮುಖ ಆಶಯವಾಗಿರುವ ಹಾಗೂ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕಾವೇರಿ ತಾಲ್ಲೂಕಿನ ಕನಸನ್ನು ಸಾಕಾರಗೊಳಿಸುವ ಹೋರಾಟದಲ್ಲಿ ವಿ.ಪಿ.ಶಶಿಧರ್ ಸಕ್ರಿಯವಾಗಿ ತೊಡಗಿಸಿಕೊಂಡು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ನಿರಂತರವಾಗಿ ಹೋರಾಡಿರುವ ಅವರ ಸಾರ್ವಜನಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸೆ.27ರಂದು ಸಂಜೆ 5 ಗಂಟೆಗೆ ಕುಶಾಲನಗರದ ತಾವರೆಕೆರೆಯ ಎಸ್‌ಎಲ್‌ಎನ್ ಗ್ರ್ಯಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಅರಮೇರಿ ಮಠದ ಶ್ರೀಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಶಾಸಕ ಹಾಗೂ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಹೆಚ್.ವಿಶ್ವನಾಥ್, ‘ಶಕ್ತಿ’ ದಿನಪತ್ರಿಕೆಯ ಸಂಪಾದಕ ಚಿದ್ವಿಲಾಸ್, ಹಿರಿಯ ಮುಖಂಡ ಎಂ.ಲಕ್ಷ್ಮಣ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ, ಸಾಮಾಜಿಕ ಚಿಂತಕ ಹೆಚ್.ಕೆ.ವಿವೇಕಾನಂದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ.
‘ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ’ ವಿಚಾರ ಸಂಕಿರಣ
ನಾಗರಿಕ ಸನ್ಮಾನಕ್ಕೂ ಮುನ್ನ ಸಂಜೆ 4 ಗಂಟೆಗೆ ‘ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ’ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಪತ್ರಕರ್ತ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕ ನಜೀರ್ ಅಹಮ್ಮದ್ ಉದ್ಘಾಟಿಸಲಿದ್ದಾರೆ. ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ ಮುನೀರ್ ಕಾಟಿಪಳ್ಳ ವಿಚಾರ ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಆರ್.ಮಾದಪ್ಪ, ಜನಪರ ಹೋರಾಟಗಾರ ಪಿ.ಆರ್.ಭರತ್, ರೆಡ್‌ಕ್ರಾಸ್ ಅಧ್ಯಕ್ಷ ಎಸ್.ಕೆ.ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರಬಾಬು, ಹಿರಿಯ ರಾಜಕಾರಣಿ ಎಸ್.ಕೆ.ವೀರಪ್ಪ, ಪ್ರಗತಿಪರ ಹೋರಾಟಗಾರ ಡಿ.ಎಸ್.ನಿರ್ವಾಣಪ್ಪ, ಪ್ರಗತಿಪರ ಚಿಂತಕ ನಂದ ಸುಬ್ಬಯ್ಯ, ರೋಟರಿ ಸಂಸ್ಥೆಯ ಪ್ರತಿನಿಧಿ ಮನು ಪೆಮ್ಮಯ್ಯ ಮತ್ತಿತರರು ಉಪಸ್ಥಿತರಿರುವರು ಎಂದು ಕೆ.ಎಸ್.ಕೃಷ್ಣೇಗೌಡ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಖಜಾಂಚಿ ಹಾಗೂ ಕುಶಾಲನಗರ ಪುರಸಭಾ ಮಾಜಿ ಸದಸ್ಯ ವಿ.ಎಸ್.ಆನಂದ್ ಕುಮಾರ್, ನಿರ್ದೇಶಕ ನವೀದ್ ಖಾನ್, ನಿರ್ದೇಶಕ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಫೀಕ್ ಖಾನ್, ನಿರ್ದೇಶಕ ಇರ್ಫಾನ್ ಎಂ.ಜೆ., ನಿರ್ದೇಶಕ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ್ ಉಪಸ್ಥಿತರಿದ್ದರು.







