ಸುಂಟಿಕೊಪ್ಪ, NEWS DESK ಸೆ.23: ಕೊಡಗಿನ ಜನಜೀವನ ಮತ್ತು ಕೃಷಿ ಬದುಕಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಡಾ. ಕೆ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಆಕ್ಷೇಪಣೆ ಇಲ್ಲ ಎಂಬ ಅಭಿಪ್ರಾಯವನ್ನು ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ಒಕ್ಕೊರಲಿನಿಂದ ವ್ಯಕ್ತಪಡಿಸಲಾಯಿತು.
ಬುಧವಾರ ಕೊಡಗರಹಳ್ಳಿಯ ಮಹಾತ್ಮ ಗಾಂಧಿ ಕಾರ್ಯಾಲಯ ಸಭಾಂಗಣದಲ್ಲಿ ಕೊಡಗರಹಳ್ಳಿ, ಅಂದಗೋವೆ ಹಾಗೂ ಕಲ್ಲೂರು ಗ್ರಾಮಗಳನ್ನು ಒಳಗೊಂಡಂತೆ ಕಸ್ತೂರಿ ರಂಗನ್ ವರದಿ ಜಾರಿಯ ಸಾಧಕ-ಬಾಧಕಗಳು ಹಾಗೂ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪಡೆಯಲು ವಿಶೇಷ ಗ್ರಾಮಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಆಡಳಿತಾಧಿಕಾರಿ ವೀರಣ್ಣ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ 7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಯ್ಯ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯು 257 ಪುಟಗಳನ್ನು ಒಳಗೊಂಡಿದ್ದು, 179ನೇ ಪುಟದಲ್ಲಿ ಕೊಡಗು ಜಿಲ್ಲೆಯ 53 ಗ್ರಾಮಗಳು ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಒಳಪಡುತ್ತವೆ ಎಂದು ಉಲ್ಲೇಖಿಸಲಾಗಿದೆ. ಕೊಡಗರಹಳ್ಳಿ ಗ್ರಾಮವು ನೇರವಾಗಿ ಈ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ, ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಕಾಡು ಹಾಗೂ ದೇವರಕಾಡು ಪ್ರದೇಶಗಳು ಇರುವುದರಿಂದ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಗ್ರಾಮಸಭೆಯಲ್ಲಿ ವ್ಯಕ್ತಪಡಿಸುವಂತೆ ಕೋರಿದರು.
ಕಲ್ಲೂರು ನಿವಾಸಿ ಹರಿದಾಸ್ ಮಾತನಾಡಿ, ಅಂದಗೋವೆ ಹಾಗೂ ಕಲ್ಲೂರು ವ್ಯಾಪ್ತಿಯಲ್ಲಿ ಸುಮಾರು 600 ಮನೆಗಳಿದ್ದು, ಇಲ್ಲಿ ಬಡವರು, ಮಧ್ಯಮ ವರ್ಗದವರು ಹಾಗೂ ತೋಟದ ಲೈನ್ ಮನೆಗಳಲ್ಲಿ ವಾಸಿಸುವ ಕುಟುಂಬಗಳಿವೆ. ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯನ್ನು ಶೂನ್ಯಕ್ಕೆ ಇಳಿಸದಿದ್ದಲ್ಲಿ ಒಕ್ಕಲೆಬ್ಬಿಸುವ ಭೀತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಸದಸ್ಯ ಲತೇಶ್ ಕುಮಾರ್ ಮಾತನಾಡಿ, ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ನಡೆಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕವೇ ವರದಿಯನ್ನು ಜಾರಿಗೊಳಿಸಬೇಕು. ಯಥಾವತ್ತಾಗಿ ವರದಿಯನ್ನು ಜಾರಿಗೊಳಿಸುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.
ಡಾ. ಎ.ಬಿ. ತಮ್ಮಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಸುಮಾರು 600 ಪುಟಗಳನ್ನು ಒಳಗೊಂಡಿದ್ದು, ಪ್ರತಿ ಗ್ರಾಮ ಪಂಚಾಯಿತಿಯ ಮೂಲಕ ಕನ್ನಡ ಪ್ರತಿಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕು. ಕಾಫಿ ತೋಟಗಳನ್ನು ಅರಣ್ಯವೆಂದು ಪರಿಗಣಿಸಿರುವ ವರದಿಯ ಅಂಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಪಟ್ಟಿ ಮಾಡಿರುವುದನ್ನು ಕೈಬಿಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಗ್ರ ಸರ್ವೆ ನಡೆಸಿ, ಕೃಷಿ, ಕಾಫಿ ಸೇರಿದಂತೆ ಯಾವುದೇ ಕೃಷಿ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವೀರಣ್ಣ ಮಾತನಾಡಿ, ಗ್ರಾಮಸಭೆಯಲ್ಲಿ ವ್ಯಕ್ತವಾದ ಎಲ್ಲಾ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನಿಯಮಾನುಸಾರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪಂಚಾಯಿತಿಯ ಮಾಜಿ ಸದಸ್ಯರು, ಗ್ರಾಮಸ್ಥರು ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.







