
ಮಡಿಕೇರಿ ಸೆ.25 NEWS DESK : ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ಕನಿಷ್ಟ ವೇತನ ಜಾರಿಗೊಳಿಸಬೇಕು, ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಸಂಘಟನೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ಸೆ.8ರಂದು ರಾಜ್ಯಮಟ್ಟದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮನವಿ ಸ್ವೀಕರಿಸಿದ್ದರು. ಮುಖ್ಯಮಂತ್ರಿಗಳೊoದಿಗೆ ಸೆ.15ರಂದು ಮಾತುಕತೆ ನಡೆಸುವ ಭರವಸೆ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲಾಗಿತ್ತು. ಆದರೆ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಸೆ.25ರಿಂದ ಶಾಸಕರು ಹಾಗೂ ಸಚಿವರ ಕಚೇರಿ-ಮನೆಗಳ ಎದುರು ಪ್ರತಿಭಟನೆ ನಡೆಸಲು ಸಿಐಟಿಯು ರಾಜ್ಯ ಸಮಿತಿ ನಿರ್ಧರಿಸಿದೆ. ಇದರ ಭಾಗವಾಗಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದು ಸಿಐಟಿಯು ಮುಖಂಡ ಪಿ.ಆರ್.ಭರತ್ ತಿಳಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಅಗತ್ಯ ತಿದ್ದುಪಡಿಗಳ ಬಳಿಕ ರಾಜ್ಯ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ಎಲ್ಲಾ ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸಬೇಕು, ಇಎಸ್‌ಐ, ಇಪಿಎಫ್ ಹಾಗೂ ಬೋನಸ್‌ಗೆ ಇರುವ ವೇತನ ಮಿತಿಗಳನ್ನು ರದ್ದುಗೊಳಿಸಬೇಕು ಮತ್ತು ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎ.ಸಿ.ಸಾಬು ಸೇರಿದಂತೆ ಕಾರ್ಮಿಕ ಮುಖಂಡರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.









