ಪೊನ್ನಂಪೇಟೆ, NEWS DESK ಸೆ.26: ತಾಲೂಕಿನ ಶ್ರೀಮಂಗಲ-ನಾಲ್ಕೇರಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ₹1 ಕೋಟಿ ವೆಚ್ಚದ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಶ್ರೀಮಂಗಲ-ನಾಲ್ಕೇರಿ ಭಾಗದ ರಸ್ತೆಯಲ್ಲಿ ಪ್ರತಿದಿನ ನೂರಾರು ಜನರು ಹಾಗೂ ವಾಹನಗಳು ಸಂಚರಿಸುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸುಗಮ ಮತ್ತು ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸುವ ಮೂಲಕ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಡ ಪ್ರಶಾಂತ್, ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಡ ಲಾಲಾ ಅಪ್ಪಣ್ಣ, ನಾಲ್ಕೇರಿ ವಲಯ ಅಧ್ಯಕ್ಷ ತಿತೀರ ಕಟ್ಟಿ ಕಾರ್ಯಪ್ಪ, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷ ತಿತೀರ ಪ್ರಭು, ಶ್ರೀಮಂಗಲ ವಲಯ ಅಧ್ಯಕ್ಷ ಪಾಲ್ವಿನ್ ಪೂಣಚ್ಚ, ಕೆ. ಬಾಡಗ ವಲಯ ಅಧ್ಯಕ್ಷ ಚಿಮ್ಮಣ್ಣಮಾಡ ರವಿ, ಹಿರಿಯ ಕಾಂಗ್ರೆಸ್ ಮುಖಂಡ ಪಿ.ಕೆ. ಪೊನ್ನಪ್ಪ, ಡಿಸಿಸಿ ಸದಸ್ಯ ಪೆಮ್ಮಂಡ ರಾಜ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.








