ಮಡಿಕೇರಿ, NEWS DESK ಸೆ.26: 2030ರ ವೇಳೆಗೆ ದೇಶದಲ್ಲಿ ಮಲೇರಿಯಾ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಭಾಗವಾಗಿ, ಸಬ್ ನ್ಯಾಷನಲ್ ಮಲೇರಿಯಾ ಎಲಿಮಿನೇಷನ್ ವ್ಯಾಲಿಡೇಶನ್ (SNMEV) ರಾಷ್ಟ್ರೀಯ ತಂಡ ಕೊಡಗು ಜಿಲ್ಲೆಗೆ ಮೂರು ದಿನಗಳ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಂಡವು ಸೋಮವಾರಪೇಟೆ ತಾಲೂಕು ಆಸ್ಪತ್ರೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ, ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಂಟಿಕೊಪ್ಪ ಉಪಕೇಂದ್ರ, ಮಡಿಕೇರಿ ತಾಲೂಕಿನ ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿತು. ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣ ಹಾಗೂ ನಿರ್ಮೂಲನೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳು, ರೋಗಿಗಳ ಚಿಕಿತ್ಸಾ ಅನುಸರಣೆ ಮತ್ತು ದಾಖಲಾತಿ ನಿರ್ವಹಣೆಯನ್ನು ತಂಡ ಪರಿಶೀಲಿಸಿತು.
ದೆಹಲಿಯ ಡಾ. ಕಲ್ಪನಾ ಬರುವ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಕೇಂದ್ರ ತಂಡದ ಡಾ. ಆರ್. ತೇನಾಂಬಿಗೈ, ಡಾ. ಬಿಜೀತ್ ಬಿಸ್ವಾ ಹಾಗೂ ಡಾ. ಶ್ಯಾಮ್ ಬಂದು ರಾತ್ ಅವರು ತಂಡದಲ್ಲಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್ ಬಿ.ಎಲ್., ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್, ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ. ಸುನಿಲ್, ಜಿಲ್ಲಾ ಎಂಟಮಾಲಜಿಸ್ಟ್ ಮಂಜುನಾಥ್, ಜಿಲ್ಲೆಯ NVBDCP ತಂಡದ ಸದಸ್ಯರು, ವಿವಿಧ ಆರೋಗ್ಯ ಸಂಸ್ಥೆಗಳ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ವಹಣೆ ಕಂಡುಬಂದಿದೆ ಎಂದು ತಂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವು ಸಣ್ಣಪುಟ್ಟ ನಿರ್ವಹಣಾ ಅಂಶಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್ ತಿಳಿಸಿದ್ದಾರೆ.
ಪರಿಶೀಲನೆ ಅಂತ್ಯದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಕೇಂದ್ರ ತಂಡದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.








