ನಾಪೋಕ್ಲು, NEWS DESK ಸೆ.29: ಇಲ್ಲಿಗೆ ಸಮೀಪದ ಮೂರ್ನಾಡಿನ ಕಗ್ಗಾಲು ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿರಾಜಪೇಟೆ ವಲಯದ ವತಿಯಿಂದ ಹೈನುಗಾರಿಕೆ ಕುರಿತು ‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಶುವೈದ್ಯೆ ಡಾ. ಶಿಲ್ಪಾ ಮಾತನಾಡಿ, ಹೈನುಗಾರಿಕೆಯಲ್ಲಿ ಜಾನುವಾರುಗಳ ತಳಿ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಎಚ್.ಎಫ್. ಹಾಗೂ ಜರ್ಸಿ ಸೇರಿದಂತೆ ಸೂಕ್ತ ಮಿಶ್ರತಳಿಗಳನ್ನು ಆಯ್ಕೆ ಮಾಡುವುದು ಉತ್ತಮ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಾನುವಾರುಗಳಿಗೆ ಗುಣಮಟ್ಟದ ಹಸಿರು ಮೇವು ಹಾಗೂ ಅಜೋಲಾದಂತಹ ಜಲಸಸ್ಯಗಳನ್ನು ನೀಡಬೇಕು. ಕಾಲಕಾಲಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ಜಾನುವಾರುಗಳಿಗೆ ವಿಮೆ ಮಾಡಿಸುವುದು ಹಾಗೂ ಕರುಗಳ ಸಮರ್ಪಕ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿರಾಜಪೇಟೆ ತಾಲೂಕಿನ ಕೃಷಿ ಅಧಿಕಾರಿ ವಸಂತ್ ಮಾತನಾಡಿ, ಧರ್ಮಸ್ಥಳ ಯೋಜನೆಯ ಮೂಲಕ ಹೈನುಗಾರಿಕೆಗೆ ಆರ್ಥಿಕ ನೆರವು ದೊರೆಯುತ್ತಿದ್ದು, ರೈತ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ವರಲಕ್ಷ್ಮಿ ಅವರು ಹೈನುಗಾರಿಕೆಯಿಂದ ದೊರೆಯುವ ಆರ್ಥಿಕ ಲಾಭದ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಉಪ ಕಸುಬುಗಳಾದ ಆಡು ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಯ ಮಹತ್ವದ ಬಗ್ಗೆಯೂ ವಿವರಿಸಿದರು.
ಕಾರ್ಯಕ್ರಮದಲ್ಲಿ ವಲಯದ ಸೇವಾಪ್ರತಿನಿಧಿ ದಿವ್ಯ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕರಾದ ಮಧು, ರಾಜಣ್ಣ, ವಿಪ್ಪನ್, ವರಲಕ್ಷ್ಮಿ, ಪಾರ್ವತಿ, ಕಾಯಪ್ಪ, ಮೇದಪ್ಪ ಹಾಗೂ ಅಪ್ಪಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯ ಹೈನುಗಾರಿಕಾ ರೈತರು ಭಾಗವಹಿಸಿದ್ದರು.
ದುಗ್ಗಳ ಸದಾನಂದ







