
ತಿತಿಮತಿ, NEWS DESK ಸೆ.30: ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆರ್ಥಿಕ ವಂಚನೆ ಹಾಗೂ ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತಮ್ಮ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದೆ ಎಚ್ಚರಿಕೆಯಿಂದ ಇರಬೇಕು ಎಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಕಾಳೇಗೌಡ ಸಲಹೆ ನೀಡಿದರು.
ಪೊನ್ನಂಪೇಟೆ ತಾಲೂಕಿನ ತಿತಿಮತಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ (BFL), ಗಿರಿಜನ ಲ್ಯಾಂಪ್ ಸೊಸೈಟಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಜಾಹೀರಾತುಗಳ ಮೂಲಕ ಆಮಿಷವೊಡ್ಡಿ, ಒಟಿಪಿ ಹಾಗೂ ಪಿನ್‌ಗಳನ್ನು ಪಡೆದು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಂಚಕರು ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್, ಸರ್ಕಾರಿ ಇಲಾಖೆ ಅಥವಾ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಲಿಂಕ್‌ಗಳನ್ನು ಮೊಬೈಲ್‌ಗೆ ಕಳುಹಿಸಿ ವೈಯಕ್ತಿಕ ಮಾಹಿತಿಯನ್ನು ಪಡೆಯಲು ವಂಚಕರು ಪ್ರಯತ್ನಿಸುತ್ತಾರೆ. ಇಂತಹ ಯಾವುದೇ ಆಮಿಷಗಳಿಗೆ ಸಾರ್ವಜನಿಕರು ಬಲಿಯಾಗಬಾರದು ಎಂದು ಕಾಳೇಗೌಡ ಎಚ್ಚರಿಸಿದರು.
ಯಾವುದೇ ಬ್ಯಾಂಕಿಂಗ್ ವ್ಯವಹಾರಗಳ ಸಂದರ್ಭದಲ್ಲಿ ಅನುಮಾನವಿದ್ದರೆ ನೇರವಾಗಿ ಬ್ಯಾಂಕ್‌ಗೆ ತೆರಳಿ ವ್ಯವಹರಿಸುವುದು ಸುರಕ್ಷಿತ. ಗ್ರಾಮೀಣ ಪ್ರದೇಶಗಳಲ್ಲಿ ಹೊರಗಿನಿಂದ ಬರುವವರ ಚಟುವಟಿಕೆಗಳ ಬಗ್ಗೆಯೂ ನಿಗಾ ವಹಿಸಬೇಕು. ಯಾವುದೇ ಅಪರಾಧ ಪ್ರಕರಣ ಕಂಡುಬಂದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ತುರ್ತು ಸಂದರ್ಭದಲ್ಲಿ 112 ಹಾಗೂ ಸೈಬರ್ ವಂಚನೆಗೆ ಸಂಬಂಧಿಸಿದಂತೆ 1930 ಸೈಬರ್ ಅಪರಾಧ ಸಹಾಯವಾಣಿ ಮೂಲಕ ತ್ವರಿತವಾಗಿ ದೂರು ದಾಖಲಿಸುವಂತೆ ಮನವಿ ಮಾಡಿದರು.
ಬಜಾಜ್ ಫೈನಾನ್ಸ್ ಸಂಸ್ಥೆಯ ವಲಯ ಮೇಲ್ವಿಚಾರಕ ಅಶೋಕ್ ಕುಮಾರ್ ಡಿ. ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ದೃಷ್ಟಿಕೋನಕ್ಕೆ ಅನುಗುಣವಾಗಿ BFL ವತಿಯಿಂದ ರಾಷ್ಟ್ರವ್ಯಾಪಿ ಹಣಕಾಸು ಸಾಕ್ಷರತಾ ಉಪಕ್ರಮವಾದ ‘ಅರ್ಥಸೂತ್ರ ಸಂವಾದ’ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ವೈಯಕ್ತಿಕ ಬಜೆಟ್, ಉಳಿತಾಯ, ಹಣಕಾಸು ಯೋಜನೆ, ವಿಮಾ ಜಾಗೃತಿ, ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ಪಾವತಿಗಳು, ಸೈಬರ್ ಸುರಕ್ಷತೆ ಮತ್ತು ವಂಚನೆ ತಡೆ ಸೇರಿದಂತೆ ಆರ್ಥಿಕ ಯೋಗಕ್ಷೇಮದ ವಿವಿಧ ಅಂಶಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಳೆದ ಒಂದು ವರ್ಷದಿಂದ ದೇಶದ ವಿವಿಧ ಭಾಗಗಳಲ್ಲಿ ನೂರಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಂಕಜ ಮಾತನಾಡಿ, ಗ್ರಾಮೀಣ ಭಾಗದ ಜನರು ಸಾಮಾಜಿಕ ಜಾಲತಾಣ, ಬ್ಯಾಂಕಿಂಗ್ ಹಾಗೂ ಇತರ ಹಣಕಾಸು ವ್ಯವಹಾರಗಳ ಕುರಿತು ಸಮರ್ಪಕ ಮಾಹಿತಿ ಇಲ್ಲದೆ ವಂಚನೆಗೆ ಒಳಗಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಬುಡಕಟ್ಟು ಕೃಷಿಕರ ಸಂಘದ ಮುಖಂಡ ಸಿದ್ದಪ್ಪ ಮಾತನಾಡಿ, ಕಾಡಂಚಿನ ಜನರಿಗೆ ಉಪಯುಕ್ತವಾಗುವಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಇಂತಹ ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ನಡೆಯಬೇಕು ಎಂದು ಹೇಳಿದರು.
ತಿತಿಮತಿ ಸುತ್ತಮುತ್ತಲಿನ ಹಾಡಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಗಿರಿಜನ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಮಣಿಕುಂನ್ಯಾ, ಉಪಾಧ್ಯಕ್ಷೆ ಪುಷ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೊನ್ನು, ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪಿ.ಆರ್. ಪಂಕಜ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಸುಬ್ರಮಣಿ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಟಿ.ಸಿ. ರಾಮು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.








