ಮಡಿಕೇರಿ, NEWS DESK ಅ.3: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಸಂತೋಷಕೂಟದಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು.
ಗ್ರಾಮ ದೇವತೆ ಶ್ರೀ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಂಪ್ರದಾಯದಂತೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ವಿಎಸ್‌ಎಸ್‌ಎನ್ ಸಭಾಂಗಣಕ್ಕೆ ತೆರಳಲಾಯಿತು.
ಸಭಾಂಗಣದಲ್ಲಿ ಸಮಾಜದ ಸದಸ್ಯರ ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧ ಮನರಂಜನಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಬಾಲಕರಿಗೆ ತಲೆಯ ಮೇಲೆ ಕಪ್ ಇಟ್ಟು ಓಟ, ಗೋಣಿ ಚೀಲ ಓಟ, ಬಾಲಕಿಯರಿಗೆ ನಿಂಬೆ ಚಮಚ ಓಟ ಹಾಗೂ ಮಹಿಳೆಯರಿಗೆ ‘ಬಾಂಬ್ ಇನ್ ದ ಸಿಟಿ’ ಆಟವನ್ನು ಏರ್ಪಡಿಸಲಾಗಿತ್ತು. ಸಮಾಜ ಬಾಂಧವರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಬಡವರಿಗೆ ಸಹಾಯ ಮಾಡಬೇಕು
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯರು ಹಾಗೂ ಗೌಡ ಸಮಾಜದ ಸ್ಥಳದಾನಿಗಳಾದ ಕುಂಬಗೌಡನ ಪುಷ್ಪ ಉತ್ತಪ್ಪ ಮಾತನಾಡಿ, ಸಮಾಜ ಬಾಂಧವರೆಲ್ಲರೂ ಒಟ್ಟಾಗಿ ಬಾಳಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಪುಸ್ತಕಗಳನ್ನು ಓದುವ ಮೂಲಕ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವ ಹಾಗೂ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ. ಇದರೊಂದಿಗೆ ಪ್ರಮುಖವಾಗಿ ಬಡವರಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದರು.
ಇಂತಹ ಕಾರ್ಯಕ್ರಮಗಳಿಂದ ನೆಮ್ಮದಿ
ಪಶುವೈದ್ಯಾಧಿಕಾರಿ ನಂಗಾರು ಮೋಹನ್‌ಕುಮಾರ್ ಮಾತನಾಡಿ, ಜನಾಂಗ ಬಾಂಧವರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಇಂತಹ ಸಂದರ್ಭಗಳಲ್ಲಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದರೊಂದಿಗೆ ಒಂದಿಷ್ಟು ನೆಮ್ಮದಿ ದೊರೆಯಲಿದೆ ಎಂದರು. ಮುಂದಿನ ಸಾಲಿನಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ನೀಡುವುದಾಗಿ ಘೋಷಿಸಿದರು.
ಸಮಾಜದ ಚಟುವಟಿಕೆಗಳಲ್ಲಿ ಮಹಿಳೆಯರು ಮುಂದೆ ಬರಬೇಕು
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತೂಟೇರ ರೀಟಾ ಜಯಪ್ರಕಾಶ್ ಮಾತನಾಡಿ, ನಮ್ಮ ಸಂಸ್ಕೃತಿಯ ಪದ್ಧತಿ ಹಾಗೂ ಆಚರಣೆಗಳನ್ನು ಎಲ್ಲರೂ ಸೇರಿ ಆಚರಿಸಬೇಕು. ಎಲ್ಲರೂ ಮುಂದೆ ಬಂದು ಸಮಾಜಕ್ಕೆ ಕೀರ್ತಿ ತರಬೇಕು. ಈ ನಿಟ್ಟಿನಲ್ಲಿ ಮಹಿಳಾ ಒಕ್ಕೂಟವನ್ನು ರಚಿಸಲಾಗಿದ್ದು, ಮಹಿಳೆಯರು ಮುಂದೆ ಬಂದು ಒಕ್ಕೂಟವನ್ನು ಮುನ್ನಡೆಸಬೇಕು ಎಂದರು.
ಹಬ್ಬಾಚರಣೆಗಳನ್ನು ಮನೆಗಳಲ್ಲಿ ಆಚರಿಸುತ್ತೇವೆಯಾದರೂ ಎಲ್ಲರೂ ಒಗ್ಗೂಡಿ ಆಚರಿಸುವುದರಲ್ಲಿ ಹೆಚ್ಚಿನ ಅರ್ಥವಿದೆ ಎಂದು ಅವರು ಹೇಳಿದರು.
ಎಲ್ಲರೂ ಕೈಜೋಡಿಸಬೇಕು
ಸಂಘದ ಸದಸ್ಯ ಹಾಗೂ ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ, ನಮ್ಮ ಸಂಸ್ಕೃತಿಯ ಆಚರಣೆ ಹಾಗೂ ಪದ್ಧತಿಗಳು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುತ್ತವೆ. ಪ್ರತಿಯೊಬ್ಬರ ಮನೆಯಲ್ಲೂ ಅವುಗಳನ್ನು ಆಚರಿಸಲಾಗುತ್ತದೆ. ಆದರೆ ಸಮಾಜದಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ಬೆಸೆಯುವ ಸಲುವಾಗಿ ಸಮಾಜದ ಮೂಲಕ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಆಟೋಟ ಹಾಗೂ ಪ್ರತಿಭಾ ಪುರಸ್ಕಾರದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವುದರೊಂದಿಗೆ ನಮ್ಮ ಸಂಸ್ಕೃತಿಯ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಲು ಸಾಧ್ಯವಾಗುತ್ತದೆ. ಸಮಾಜದ ಪದಾಧಿಕಾರಿಗಳು ಶ್ರಮವಹಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹಿರಿಯರ ಶ್ರಮದ ಫಲ ಸಮಾಜ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಮಾತನಾಡಿ, ಮಕ್ಕಂದೂರು-ಮುಕ್ಕೋಡ್ಲು ವ್ಯಾಪ್ತಿಗೆ ಸೇರಿದ ಸಮಾಜ ಬಾಂಧವರನ್ನು ಒಂದುಗೂಡಿಸುವ ಸಲುವಾಗಿ ಹಿರಿಯರು ಶ್ರಮವಹಿಸಿ ಗೌಡ ಸಮಾಜವನ್ನು ಕಟ್ಟಿದ್ದಾರೆ. ಅದನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯದ ಜೊತೆಗೆ ಜವಾಬ್ದಾರಿಯೂ ಆಗಿದೆ. ಸಮಾಜದ ವತಿಯಿಂದ ಕೈಗೊಳ್ಳಲಾಗುವ ಮುಂದಿನ ಎಲ್ಲ ಕಾರ್ಯಚಟುವಟಿಕೆಗಳಿಗೂ ಇದೇ ರೀತಿಯ ಸಹಕಾರ ನೀಡಬೇಕು ಎಂದು ಕೋರಿದರು.
ಪ್ರತಿಭಾ ಪುರಸ್ಕಾರ
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಕೊಟ್ಟಕೇರಿಯನ ಪ್ರದೀಪ್, ಮಾಜಿ ಅಧ್ಯಕ್ಷ ತೂಟೇರ ವೆಂಕಟರಮಣ, ಹಿರಿಯರಾದ ಚೌಕಿ ಮನೆ ರಘು ತಿಮ್ಮಯ್ಯ, ಮಕ್ಕಂದೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಟ್ಟೆಮನೆ ಗಣೇಶ್, ಕೆಂಜನ ಬಸಪ್ಪ ಹಾಗೂ ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕಿ ಕುಂಬಗೌಡನ ಜಲಜಾಕ್ಷಿ ಉಪಸ್ಥಿತರಿದ್ದರು.
ಗೌಡ ಸಮಾಜದ ನಿರ್ದೇಶಕ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿದರು. ಸಮಾಜದ ಕಾರ್ಯದರ್ಶಿ ಚೀಯಂಡಿ ಸುಜಯ್ ವರದಿ ವಾಚಿಸಿದರು. ಖಜಾಂಚಿ ಗುಡ್ಡೆಮನೆ ಯೋಗಾನಂದ ಬಹುಮಾನ ವಿತರಣಾ ಕಾರ್ಯ ನೆರವೇರಿಸಿದರು. ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.








