ಬೆಂಗಳೂರು, NEWS DESK ಅ. 6: ಏಷ್ಯನ್ ಗೇಮ್ಸ್ 2026ರಲ್ಲಿ ದೇಶ ಹಾಗೂ ಕರ್ನಾಟಕದ ಕೀರ್ತಿ ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದಲ್ಲಿ ಸನ್ಮಾನಿಸಿದರು. ಇದೇ ವೇಳೆ ಪದಕ ವಿಜೇತರಿಗೆ ಒಟ್ಟು ₹8 ಕೋಟಿ ನಗದು ಬಹುಮಾನ ಸೇರಿದಂತೆ ಕ್ರೀಡಾಪಟುಗಳಿಗೆ ಹಲವು ಮಹತ್ವದ ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸಿದರು.
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇನ್ನು ಮುಂದೆ ಚಿನ್ನದ ಪದಕ ವಿಜೇತರಿಗೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹50 ಲಕ್ಷ ನಗದು ಪುರಸ್ಕಾರ ನೀಡಲಾಗುವುದು.
ಈ ಹಿಂದೆ ಚಿನ್ನದ ಪದಕಕ್ಕೆ ₹35 ಲಕ್ಷ, ಬೆಳ್ಳಿಗೆ ₹25 ಲಕ್ಷ ಹಾಗೂ ಕಂಚಿನ ಪದಕಕ್ಕೆ ₹15 ಲಕ್ಷ ನಗದು ಬಹುಮಾನ ನೀಡಲಾಗುತ್ತಿತ್ತು.
20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನ
ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗಗಳ ಕ್ರೀಡಾಪಟುಗಳು ಇದರ ಫಲಾನುಭವಿಗಳಾಗಿದ್ದಾರೆ.
ಒಲಿಂಪಿಕ್ಸ್ ತಯಾರಿಗೆ ತಲಾ ₹10 ಲಕ್ಷ
ಮುಂದಿನ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೂ ಸರ್ಕಾರ ನೆರವು ಘೋಷಿಸಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿನ ‘ಗುರಿ ಒಲಿಂಪಿಕ್ಸ್’ ಯೋಜನೆಗೆ ಸೇರ್ಪಡೆ ಮಾಡಲಾಗಿದೆ.
ಒಲಿಂಪಿಕ್ಸ್ ತಯಾರಿಗಾಗಿ ಈ ಕ್ರೀಡಾಪಟುಗಳಿಗೆ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುತ್ತದೆ.
ಕ್ರೀಡಾಪಟುಗಳಿಗೆ ನೇರ ಸರ್ಕಾರಿ ಉದ್ಯೋಗ
ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಶೇ.2ರಷ್ಟು ಮೀಸಲಾತಿ
ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇರ ನೇಮಕಾತಿಗಳಲ್ಲಿ ಶೇ.2ರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ. ಗುಂಪು-ಎ, ಗುಂಪು-ಬಿ, ಗುಂಪು-ಸಿ ಹಾಗೂ ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈ ಕುರಿತು ಅಕ್ಟೋಬರ್ 3, 2026ರಂದು ಅಧಿಸೂಚನೆ ಹೊರಡಿಸಲಾಗಿದೆ.
ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳು
ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕದ ಪರ ಪದಕ ಗೆದ್ದ ಪ್ರಮುಖ ಕ್ರೀಡಾಪಟುಗಳಲ್ಲಿ ಶ್ರೇಯಾಂಕ ಆರ್. ಪಾಟೀಲ್ (ಕ್ರಿಕೆಟ್–ಚಿನ್ನ), ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್–ಚಿನ್ನ ಮತ್ತು ಬೆಳ್ಳಿ), ತಿಲೋತ್ತಮಾ ಸೇನ್ (ಶೂಟಿಂಗ್–ಬೆಳ್ಳಿ), ಆಯುಷ್ ಆರ್. ಶೆಟ್ಟಿ (ಬ್ಯಾಡ್ಮಿಂಟನ್–ಬೆಳ್ಳಿ), ಸ್ನೇಹಾ ಎಸ್.ಎಸ್. (ಅಥ್ಲೆಟಿಕ್ಸ್–ಕಂಚು), ಅದಿತಿ ಅಶೋಕ್ (ಗಾಲ್ಫ್–ಬೆಳ್ಳಿ), ಪ್ರಣವಿ ಎಸ್. ಅರಸ್ (ಗಾಲ್ಫ್–ಚಿನ್ನ ಮತ್ತು ಬೆಳ್ಳಿ) ಹಾಗೂ ಮೋಹಿತ್ ಎಚ್.ಎಸ್. (ಹಾಕಿ–ಚಿನ್ನ) ಸೇರಿದ್ದಾರೆ.
ಸನ್ಮಾನ ಕಾರ್ಯಕ್ರಮದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್, ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು, ಪದಕ ವಿಜೇತ ಕ್ರೀಡಾಪಟುಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಅನುಚೇತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.








