ನಾಪೋಕ್ಲು, NEWS DESK ಅ.06: ಪವಿತ್ರ ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಅಂಗವಾಗಿ ಭಾಗಮಂಡಲದ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ‘ಆಜ್ಞಾ ಮುಹೂರ್ತ’ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಸಂಪ್ರದಾಯದಂತೆ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮಂಗಳವಾದ್ಯಗಳೊಂದಿಗೆ ರವಿ ಹೆಬ್ಬಾರ್ ಅವರ ನಿವಾಸಕ್ಕೆ ತೆರಳಲಾಯಿತು. ಅಲ್ಲಿನ ತೋಟದಿಂದ ಶಾಸ್ತ್ರೋಕ್ತವಾಗಿ ಬಾಳೆಗೊನೆಯನ್ನು ಕಡಿಯಲಾಯಿತು. ಬಳಿಕ ಬಾಳೆಗೊನೆಯೊಂದಿಗೆ ದೇವಾಲಯಕ್ಕೆ ಮರಳಿ, ಪ್ರದಕ್ಷಿಣೆ ನೆರವೇರಿಸಿ ‘ತಪ್ಪಡ್ಕ (ತಪ್ಪು ದಂಡ)’ ತೆರೆಯುವ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಯಿತು.
ಮದ್ಯ, ಮಾಂಸ ಸೇವನೆ ನಿಷೇಧ
ಜಾತ್ರೋತ್ಸವದ ಪವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸೋಮವಾರದಿಂದ ತಲಕಾವೇರಿ ಜಾತ್ರೆ ಮುಕ್ತಾಯಗೊಂಡು, ತೀರ್ಥೋದ್ಭವದ ಮರುದಿನದವರೆಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಮದ್ಯ ಹಾಗೂ ಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಮನವಿ ಮಾಡಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯ ವಿಘ್ನಗಳು ಸಂಭವಿಸದಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಮುಖರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ನಾಲ್ಕು ಗ್ರಾಮಗಳ ದೇವಾಲಯಗಳ ತಕ್ಕ ಮುಖ್ಯಸ್ಥರು, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ದೇವಾಲಯದ ಆಡಳಿತಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿ
- ಅಕ್ಟೋಬರ್ 15, ಮಧ್ಯಾಹ್ನ 12:35: ಧನು ಲಗ್ನದಲ್ಲಿ ‘ಅಕ್ಷಯ ಪಾತ್ರೆ’ಗೆ ಅಕ್ಕಿ ಹಾಕುವ ಕಾರ್ಯಕ್ರಮ.
- ಅಕ್ಟೋಬರ್ 15, ಸಂಜೆ 06:03: ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವ ವಿಧಿ.
- ಅಕ್ಟೋಬರ್ 17, ರಾತ್ರಿ 07:50: ಮೇಷ ಲಗ್ನದಲ್ಲಿ ಪವಿತ್ರ ‘ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ’ ನೆರವೇರಲಿದೆ.
ವರದಿ: ದುಗ್ಗಳ ಸದಾನಂದ








